EVM ಬದಲು ಮತಪತ್ರಕ್ಕೆ ಮರಳಬೇಕು ಎಂದು ಕೋರಿದ್ದ ಪಿಐಎಲ್ ಅನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಚುನಾವಣೆಗಳಲ್ಲಿ ಮತಪತ್ರಗಳನ್ನು ಮರು ಪರಿಚಯಿಸಬೇಕು ಹಾಗೂ ಇನ್ನಿತರ ಚುನಾವಣಾ ಸುಧಾರಣೆಗಳನ್ನು ಜಾರಿಗೊಳಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿದ್ಯುನ್ಮಾನ ಮತ ಯಂತ್ರಗಳನ್ನು (EVM) ತಿರುಚಬಹುದಾಗಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲದಿರುವುದನ್ನು ಪರಿಗಣಿಸಿದ ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ಪಿ.ಬಿ.ವರಾಳೆ ಅವರನ್ನೊಳಗೊಂಡಿದ್ದ ನ್ಯಾಯಪೀಠವು, ಅರ್ಜಿದಾರ ಡಾ. ಕೆ.ಎ.ಪೌಲ್ ಅವರ ವಾದವನ್ನು ತಳ್ಳಿ ಹಾಕಿತು.
EVM ಗಳಿಂದ ಪ್ರಜಾತಂತ್ರಕ್ಕೆ ಬೆದರಿಕೆಯಿದ್ದು, ಅವುಗಳನ್ನು ತಿರುಚಬಹುದಾಗಿದೆ ಎಂದು ಅರ್ಜಿದಾರ ಡಾ. ಪೌಲ್ ವಾದಿಸಿದರು. ಚಂದ್ರಬಾಬು ನಾಯ್ಡು ಹಾಗೂ ವೈ.ಎಸ್.ಜಗನ್ ಮೋಹನ್ ರೆಡ್ಡಿಯಂಥ ರಾಜಕೀಯ ನಾಯಕರು ವಿದ್ಯುನ್ಮಾನ ಮತ ಯಂತ್ರಗಳ ವಿಶ್ವಾಸಾರ್ಹತೆ ಕುರಿತು ಪ್ರಶ್ನಿಸಿರುವ ನಿದರ್ಶನವನ್ನು ಅವರು ನೀಡಿದರು. ಆದರೆ, ಈ ಆರೋಪಗಳಲ್ಲಿರುವ ಅಸ್ಥಿರತೆಯತ್ತ ಬೊಟ್ಟು ಮಾಡಿದ ನ್ಯಾಯಪೀಠವು, “ಚಂದ್ರಬಾಬು ನಾಯ್ಡು ಅಥವಾ ರೆಡ್ಡಿ ಪರಾಭವಗೊಂಡಾಗ ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸುತ್ತಾರೆ. ಅವರು ಗೆದ್ದಾಗ ಈ ಕುರಿತು ಏನನ್ನೂ ಹೇಳುವುದಿಲ್ಲ. ನಾವಿದನ್ನು ಹೇಗೆ ನೋಡಲು ಸಾಧ್ಯ? ನಾವು ಈ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ. ನೀವು ಇದೆಲ್ಲ ವಾದ ಮಾಡುವ ಸ್ಥಳ ಇದಲ್ಲ” ಎಂದು ಖಾರವಾಗಿ ಹೇಳಿತು.
ಭಾರತವು ಬ್ರಿಟನ್ ನಂತಹ ದೇಶಗಳಂತೆ ಮತ ಪತ್ರಗಳ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದೂ ಅರ್ಜಿದಾರರು ವಾದಿಸಿದರು. ಎಲಾನ್ ಮಸ್ಕ್ ರಂತಹ ವ್ಯಕ್ತಿಗಳೂ ವಿದ್ಯುನ್ಮಾನ ಮತ ಯಂತ್ರಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಎಂದೂ ಪ್ರತಿಪಾದಿಸಿದರು. ಇದರೊಂದಿಗೆ ವಿಸ್ತೃತ ಚುನಾವಣಾ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಚುನಾವಣೆಯಲ್ಲಿ ಹಣ ಅಥವಾ ಮದ್ಯ ಹಂಚುವಾಗ ಸಿಕ್ಕಿ ಬೀಳುವ ಅಭ್ಯರ್ಥಿಯನ್ನು ಐದು ವರ್ಷಗಳ ಕಾಲ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು, ಇಂತಹ ರೂಢಿಯನ್ನು ನಿಯಂತ್ರಿಸಲು ಸಮಗ್ರ ನೀತಿಯನ್ನು ಅಳವಡಿಸಿಕೊಳ್ಳಬೇಕು, ಚುನಾವಣೆಯಲ್ಲಿನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮತದಾರರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು, ರಾಜಕೀಯ ಪಕ್ಷಗಳ ನಿಧಿ ಸಂಗ್ರಹದ ಕುರಿತು ಪರಿಶೀಲನೆ ನಡೆಸಲು ತನಿಖಾ ಯಾಂತ್ರಿಕತೆಯನ್ನು ಅಳಡಿಸಿಕೊಳ್ಳಬೇಕು ಹಾಗೂ ಚುನಾವಣಾ ಹಿಂಸಾಚಾರಗಳನ್ನು ಮಟ್ಟ ಹಾಕಲು ನೀತಿ ಚೌಕಟ್ಟನ್ನು ರೂಪಿಸಬೇಕು ಎಂದೂ ಅರ್ಜಿದಾರ ಪೌಲ್ ಮನವಿ ಮಾಡಿದ್ದರು.
ಆದರೆ, ಭಾರತೀಯ ಚುನಾವಣಾ ವ್ಯವಸ್ಥೆಯ ಸದೃಢತೆಯನ್ನು ಪುನರುಚ್ಚರಿಸಿದ ನ್ಯಾಯಪೀಠವು, ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಬಹುದಾಗಿದೆ ಎಂಬುದನ್ನು ಸಮರ್ಥಿಸಲು ಸಾಕ್ಷ್ಯಧಾರಗಳ ಕೊರತೆ ಇದೆ ಎಂದು ಅಭಿಪ್ರಾಯ ಪಟ್ಟು, ಅರ್ಜಿಯನ್ನು ವಜಾಗೊಳಿಸಿತು.