ಪ್ರತಿಭಟನೆ ನಿರತ ದಲ್ಲೇವಾಲ್ರನ್ನು ಆಸ್ಪತ್ರೆಗೆ ದಾಖಲಿಸಲು ಪಂಜಾಬ್ ಸರಕಾರಕ್ಕೆ ಡಿ. 31ರ ವರೆಗೆ ಸುಪ್ರೀಂ ಗಡು
ಜಗಜೀತ್ ಸಿಂಗ್ ದಲ್ಲೇವಾಲ್ | PTI
ಹೊಸದಿಲ್ಲಿ : ತಿಂಗಳಿಗಿಂತಲೂ ಅಧಿಕ ಕಾಲ ಉಪವಾಸ ಮುಷ್ಕರ ನಡೆಸುತ್ತಿರುವ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸುಪ್ರೀಂ ಕೋರ್ಟ್ ಶನಿವಾರ ಪಂಜಾಬ್ ಸರಕಾರಕ್ಕೆ ಡಿಸೆಂಬರ್ 31ರ ವರೆಗೆ ಕಾಲಾವಕಾಶ ನೀಡಿದೆ.
ದಲ್ಲೇವಾಲ್ಗೆ ವೈದ್ಯಕೀಯ ಆರೈಕೆಯನ್ನು ಕಡ್ಡಾಯಗೊಳಿಸಿದ ತನ್ನ ಹಿಂದಿನ ಆದೇಶಕ್ಕೆ ಬದ್ಧರಾಗದ ಪಂಜಾಬ್ ಸರಕಾರವನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ರಜಾಕಾಲದ ಪೀಠ ತರಾಟೆಗೆ ತೆಗೆದುಕೊಂಡಿದೆ.
ದಲ್ಲೇವಾಲ್ ಅವರನ್ನು ಆಸ್ಪತ್ರೆಗೆ ಸೇರಿಸುವ ಪಂಜಾಬ್ ಸರಕಾರದ ಪ್ರಯತ್ನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾ ನಿರತ ರೈತರಿಗೆ ನ್ಯಾಯಾಲಯ ಛೀಮಾರಿ ಹಾಕಿತು.
ದಲ್ಲೇವಾಲ್ ಸಾಯಲು ಬಯಸುವವರು ಎಂಥಾ ರೈತ ನಾಯಕರು? ಎಂದು ನ್ಯಾಯಾಲಯ ಪ್ರಶ್ನಿಸಿದೆ. ದಲ್ಲೇವಾಲ್ ಅವರು ಒತ್ತಡಕ್ಕೆ ಒಳಗಾದಂತೆ ಕಾಣುತ್ತದೆ ಎಂದು ಅದು ಹೇಳಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ ಸಂಘಟನೆ)ದ ವರಿಷ್ಠ ದಲ್ಲೇವಾಲ್ ಅವರು ಪಂಜಾಬ್-ಹರ್ಯಾಣ ಗಡಿಯಲ್ಲಿರುವ ಖನೌರಿಯಲ್ಲಿ ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕೆಂಬ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಂಜಾಬ್ನ ರೈತರ ಸಮೂಹ ನಡೆಸುತ್ತಿರುವ ವ್ಯಾಪಕ ಚಳವಳಿಯ ಭಾಗವಾಗಿ ದಲ್ಲೇವಾಲ್ ಅವರು ಉಪವಾಸ ಮುಷ್ಕರ ನಡೆಸುತ್ತಿದ್ದಾರೆ.
ಕಾನೂನು ಖಾತರಿಯ ಜೊತೆಗೆ ಭಾರತದಲ್ಲಿ ಕೃಷಿಗಾಗಿ ಎಂ.ಎಸ್. ಸ್ವಾಮಿನಾಥನ್ ಆಯೋಗದ ವಿಸ್ತ್ರತ ಶಿಫಾರಸುಗಳ ಅನುಷ್ಠಾನ, ರೈತರು, ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ ಹಾಗೂ ಭೂಸ್ವಾಧೀನ ಕಾಯ್ದೆ 2013ರ ಮರು ಸ್ಥಾಪನೆ ಆಗ್ರಹವನ್ನು ಈಡೇರಿಸುವಂತೆ ಕೂಡ ಅವರು ಆಗ್ರಹಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ ರೈತರು, ಫೆಬ್ರವರಿ 18ರಿಂದ ಯಾವುದೇ ಮಾತುಕತೆ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.