ಪಾರ್ಥ ಚಟರ್ಜಿಗೆ ಸುಪ್ರೀಂ ಕೋರ್ಟ್ ವಿನೂತನ ಜಾಮೀನು
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಶುಕ್ರವಾರ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿಗೆ ‘ಹಣ ಪಡೆದು ಉದ್ಯೋಗ ನೀಡಿರುವ’ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿನೂತನ ಮಾದರಿಯ ಜಾಮೀನೊಂದನ್ನು ನೀಡಿತು.
ಜಾಮೀನು 2025 ಫೆಬ್ರವರಿ 1ರಂದು ಜಾರಿಯಾಗುತ್ತದೆ ಹಾಗೂ ಅದಕ್ಕಿಂತ ಮೊದಲು ವಿಚಾರಣಾ ನ್ಯಾಯಾಲಯವು ಆರೋಪಿಯ ವಿರುದ್ಧ ದೋಷಾರೋಪಣೆ ಹೊರಿಸಬೇಕು. ‘‘ದುರ್ಬಲ’’ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಲು ಅವರ ಹೇಳಿಕೆಗಳನ್ನು ದಾಖಲಿಸಬೇಕು ಎಂದು ನ್ಯಾಯಾಲಯ ಹೇಳಿತು.
ಈ ತೀರ್ಪಿನ ಮೂಲಕ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭೂಯನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವೊಂದು ನ್ಯಾಯ ವ್ಯವಸ್ಥೆಯ ಎರಡು ಪ್ರಮುಖ ಅಂಶಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡಿದೆ. ಅವುಗಳೆಂದರೆ, ವಿಚಾರಣಾಧೀನ ಕೈದಿಯೋರ್ವ ವಿಚಾರಣೆಯಿಲ್ಲದೆ ಅನಿರ್ದಿಷ್ಟಾವಧಿಗೆ ಜೈಲಿನಲ್ಲಿರಬಾರದು ಮತ್ತು ಸಾಕ್ಷಿಗಳು ಯಾವುದೇ ಭೀತಿ ಅಥವಾ ಆಮಿಶಗಳಿಲ್ಲದೆ ಸಾಕ್ಷಿ ಹೇಳುವ ಮೂಲಕ ನ್ಯಾಯೋಚಿತ ಹಾಗೂ ವೇಗದ ವಿಚಾರಣೆಯಾಗಬೇಕು.
ಅನುಷ್ಠಾನ ನಿರ್ದೇಶನಾಲಯವು 75 ವರ್ಷದ ಚಟರ್ಜಿಯನ್ನು 2022 ಜುಲೈ 23ರಂದು ಬಂಧಿಸಲಾಗಿತ್ತು. ಅಂದಿನಿಂದ ಎರಡೂವರೆ ವರ್ಷಗಳ ಕಾಲ ಅವರು ಜೈಲಿನಲ್ಲಿದ್ದಾರೆ.
ಸಾವಿರಾರು ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ, ಹಣ ಪಡೆದು ಅನರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದ್ದಾರೆ ಎಂಬ ಆರೋಪವನ್ನು ಅನುಷ್ಠಾನ ನಿರ್ದೇಶನಾಲಯವು ಸಚಿವರ ವಿರುದ್ಧ ಹೊರಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೋಷಾರೋಪಣೆ ಆದೇಶವನ್ನು ಚಳಿಗಾಲದ ರಜೆ ಆರಂಭಗೊಳ್ಳುವ ಮೊದಲು ಅಥವಾ 2024 ಡಿಸೆಂಬರ್ 31ರ ಮೊದಲು ಹೊರಡಿಸುವಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.
ದುರ್ಬಲ ಪ್ರಾಸಿಕ್ಯೂಶನ್ ಸಾಕ್ಷಿಗಳು ಮತ್ತು ಚಟರ್ಜಿಯ ಸಹಾಯಕಿ ಅರ್ಪಿತಾ ಮುಖರ್ಜಿ ಸೇರಿದಂತೆ ಜೀವಕ್ಕೆ ಬೆದರಿಕೆ ಎಂಬುದಾಗಿ ಭಾವಿಸುವವರ ಹೇಳಿಕೆಗಳನ್ನು ದಾಖಲಿಸುವಂತೆ ಸುಪ್ರೀಂ ಕೋರ್ಟ್ ವಿಶೇಷ ಅನುಷ್ಠಾನ ನಿರ್ದೇಶನಾಲಯ ನ್ಯಾಯಾಧೀಶರಿಗೆ ನಿರ್ದೇಶನ ನೀಡಿತು.
ಅನುಷ್ಠಾನ ನಿರ್ದೇಶನಾಲಯವು ತನ್ನಿಂದ ವಶಪಡಿಸಿಕೊಂಡಿರುವ ಹಣವು ಸಚಿವರಿಗೆ ಸೇರಿದ್ದಾಗಿದೆ ಎಂಬುದಾಗಿ ಅರ್ಪಿತಾ ಮುಖರ್ಜಿ ಹೇಳಿದ್ದಾರೆನ್ನಲಾಗಿದೆ. ಈ ಹೇಳಿಕೆಗಳನ್ನು ಜನವರಿ ಎರಡು ಮತ್ತು ಮೂರನೇ ವಾರಗಳಲ್ಲಿ ದಾಖಲಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯವು ತನ್ನ ಕೆಲಸಗಳನ್ನು ನಿಗದಿತ ಅವಧಿಗಿಂತ ಮೊದಲು ಪೂರ್ಣಗೊಳಿಸಿದರೆ ಫೆಬ್ರವರಿ ಒಂದಕ್ಕಿಂತಲೂ ಮೊದಲೇ ಚಟರ್ಜಿಯನ್ನು ಬಿಡುಗಡೆಗೊಳಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿತು.