ಎಡಿಟರ್ಸ್ ಗಿಲ್ಡ್ ಸದಸ್ಯರಿಗೆ ಬಂಧನದ ವಿರುದ್ಧ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಮಾಧ್ಯಮಗಳಿಂದ ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರದ ಏಕಪಕ್ಷೀಯ ವರದಿಗಾರಿಕೆ ಕುರಿತು ಸತ್ಯಶೋಧನಾ ತಂಡದ ವರದಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಎಡಿಟರ್ಸ್ ಗಿಲ್ಡ್ನ ಸದಸ್ಯರಿಗೆ ಬಂಧನದ ವಿರುದ್ಧ ಮಧ್ಯಂತರ ರಕ್ಷಣೆಯನ್ನು ನೀಡಿದೆ.
ಸತ್ಯಶೋಧನಾ ತಂಡದ ವರದಿಯ ಲೇಖಕರಾದ ಸೀಮಾ ಗುಹಾ, ಭರತ ಭೂಷಣ ಮತ್ತು ಸಂಜಯ ಕಪೂರ್ ಹಾಗೂ ಎಡಿಟರ್ಸ್ ಗಿಲ್ಡ್ನ ಅಧ್ಯಕ್ಷೆ ಸೀಮಾ ಮುಸ್ತಫಾ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ವರದಿಯು ಸುಳ್ಳು, ಕಪೋಲಕಲ್ಪಿತ ಮತ್ತು ಪ್ರಾಯೋಜಿತವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಎಡಿಟರ್ಸ್ ಗಿಲ್ಡ್ ತನ್ನ ವಿರುದ್ಧದ ಎರಡು ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ನಿರ್ದೇಶನ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು. ಬುಧವಾರ ಹಿರಿಯ ವಕೀಲ ಶ್ಯಾಮ ದಿವಾನ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠದ ಮುಂದೆ ವಿಷಯವನ್ನು ಪ್ರಸ್ತಾವಿಸಿದರು.
ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಸೆ.11ರಂದು ನಡೆಸಲಿದೆ. ಸೋಮವಾರ ಮೊದಲ ಎಫ್ಐಆರ್ ದಾಖಲಾದ ಬಳಿಕ ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು, ಸತ್ಯಶೋಧನಾ ತಂಡವನ್ನು ರಚಿಸಲು ಮತ್ತು ರಾಜ್ಯದಲ್ಲಿ ತನಿಖೆಯನ್ನು ನಡೆಸಲು ಎಡಿಟರ್ಸ್ ಗಿಲ್ಡ್ಗೆ ಅಧಿಕಾರವಿಲ್ಲ. ಅವರು ಸರಕಾರ ವಿರೋಧಿ, ದೇಶವಿರೋಧಿ ಮತ್ತು ವ್ಯವಸ್ಥೆಯ ವಿರೋಧಿಗಳಾಗಿದ್ದು,ವಿ ಷವನ್ನು ಸುರಿಯಲು ಬಂದಿದ್ದರು, ತನಗೆ ಮೊದಲೇ ಗೊತ್ತಿದ್ದರೆ ಅವರು ರಾಜ್ಯವನ್ನು ಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದ್ದರು.
ಮೇ 3ರಂದು ಭುಗಿಲೆದ್ದಿದ್ದ ಮೈತೆಯಿಗಳು ಮತ್ತು ಕುಕಿಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಈವರೆಗೆ 195ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 60,000 ಜನರು ಸ್ಥಳಾಂತರಗೊಂಡಿದ್ದಾರೆ.
ಮಣಿಪುರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದೌರ್ಜನ್ಯಗಳ ಆರೋಪಗಳ ಕುರಿತು ವಿಶ್ವಸಂಸ್ಥೆಯ ತಜ್ಞರು ಸೋಮವಾರ ಕಳವಳಗಳನ್ನು ವ್ಯಕ್ತಪಡಿಸಿದ್ದರು.