ಆಪ್ ಸಂಸದ ಸಂಜಯ್ ಸಿಂಗ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆಗೆ ಸುಪ್ರೀಂ ತಡೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಯ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ವಿರುದ್ಧ ಗುಜರಾತ್‌ನ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆಗ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನು ಕೂಡ ಒಳಗೊಂಡ ದ್ವಿಸದಸ್ಯರ ಪೀಠ ಮಂಗಳವಾರ ಈ ಆದೇಶ ನೀಡಿದೆ.
‘‘ತಡೆಗೆ ಅಥವಾ ಕನಿಷ್ಠ 4 ವಾರಗಳ ಒಳಗೆ ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿದ ಮನವಿಯನ್ನು ಆಲಿಸುವಂತೆ ಪೀಠ ಉಚ್ಛ ನ್ಯಾಯಾಲಯಕ್ಕೆ ಸೂಚಿಸಿದೆ. ಮಧ್ಯಂತರ ಪರಿಹಾರದ ಮಂಜೂರಾತಿ ಅಥವಾ ನಿರಾಕರಣೆ ಕುರಿತು ಉಚ್ಛ ನ್ಯಾಯಾಲಯ ನಿರ್ಣಯಿಸುವ ವರೆಗೆ, ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲಾಗುವುದು’’ ಎಂದು ಪೀಠ ಹೇಳಿದೆ.
ಆದರೆ, ವಿಚಾರಣೆಯನ್ನು ಗುಜರಾತ್‌ನಿಂದ ಹೊರಗೆ ವರ್ಗಾಯಿಸುವಂತೆ ಸಿಂಗ್ ಸಲ್ಲಿಸಿದ ಮನವಿಯನ್ನು ಪೀಠ ತಿರಸ್ಕರಿಸಿದೆ.
ಸಿಂಗ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ತಮ್ಮ ಕಕ್ಷಿದಾರನನ್ನು ತಪ್ಪಿತಸ್ಥನೆಂದು ಪರಿಗಣಿಸುವ ಹಾಗೂ ತಡೆಯಾಜ್ಞೆ ಕೋರಿ ಅವರು ಸಲ್ಲಿಸಿರುವ ಮೇಲ್ಮನವಿ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗಲೂ ಅನರ್ಹಗೊಳಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಪ್ರತಿಪಾದಿಸಿದರು. ಪ್ರಕರಣದಲ್ಲಿ ದೂರುದಾರರಾಗಿರುವ ಗುಜರಾತ್ ವಿಶ್ವವಿದ್ಯಾನಿಲಯದ ವಿರುದ್ಧ ಸಿಂಗ್ ಒಂದು ಮಾತನ್ನು ಕೂಡ ಆಡಿಲ್ಲ. ಅವರು ಈ ಪ್ರಕರಣದಲ್ಲಿ ಅಮಾಯಕ ಎಂದು ಅವರು ಹೇಳಿದರು.
ಮೋದಿ ಅವರ ಪದವಿಗೆ ಸಂಬಂಧಿಸಿದಂತೆ 2023 ಎಪ್ರಿಲ್ 1 ಹಾಗೂ 2ರಂದು ವ್ಯಂಗ್ಯ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಆಪ್ ನಾಯಕರ ವಿರುದ್ಧ ಗುಜರಾತ್ ವಿಶ್ವವಿದ್ಯಾನಿಲಯ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿತ್ತು.
ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಇನ್ನೊಂದು ಪ್ರಕರಣದಲ್ಲಿ ಸಿಂಗ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಧಾನಿ ಮೋದಿ ಅವರ ಪದವಿ ಕುರಿತು ಮುಖ್ಯ ಮಾಹಿತಿ ಆಯುಕ್ತರ ಆದೇಶವನ್ನು ಉಚ್ಛ ನ್ಯಾಯಾಲಯ ಬದಿಗಿರಿಸಿದ ಬಳಿಕ ನೀಡಿದ ಹೇಳಿಕೆ ಕುರಿತಂತೆ ಕೇಜ್ರಿವಾಲ್ ಹಾಗೂ ಸಿಂಗ್ ವಿರುದ್ಧ ಗುಜರಾತ್ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪೀಯೂಷ್ ಪಟೇಲ್ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿದ್ದರು.