ಮೀಸಲಾತಿ ಅರ್ಜಿ ವಿಚಾರಣೆಗೆ ತಟಸ್ಥ ಪೀಠ ಸ್ಥಾಪನೆ ಕೋರಿದ ಅರ್ಜಿದಾರನಿಗೆ ರೂ. 50,000 ದಂಡ ವಿಧಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸಾರ್ವಜನಿಕ ಸೇವೆ ಕ್ಷೇತ್ರದಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಕೋರಿ ಒಬಿಸಿ ಮತ್ತು ಮೀಸಲಾತಿರಹಿತ ವರ್ಗದ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಯಾವುದೇ ಒಬಿಸಿ ಅಥವಾ ಮೀಸಲಾತಿ ರಹಿತ ವರ್ಗದ ನ್ಯಾಯಾಧೀಶರುಗಳಿಲ್ಲದ ತಟಸ್ಥ ವಿಶೇಷ ಪಿಠ ರಚಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಸುಪ್ರೀಂ ಕೋರ್ಟ್ ರೂ. 50,000 ದಂಡವನ್ನು ಪ್ರಕರಣದ ವೆಚ್ಚವನ್ನಾಗಿ ವಿಧಿಸಿದೆ.
ವಿಶೇಷ ಪೀಠ ರಚಿಸಲು ಮಧ್ಯ ಪ್ರದೇಶ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ತಮಗೆ ಬೇಕಿದ್ದ ಹಾಗೆ ಇರುವ ಸುಪ್ರೀಂ ಕೋರ್ಟ್ ಪೀಠ ರಚಿಸಬೇಕೆಂದು ಕೋರಿ ಉತ್ತಮ ಉದ್ದೇಶವಿಲ್ಲದೆ ಅರ್ಜಿ ಸಲ್ಲಿಸಿದ್ದರಿಂದ ರೂ. 50,000 ದಂಡ ವಿಧಿಸಲಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಜಸ್ಟಿಸ್ ಪಂಕಜ್ ಮಿತ್ತಲ್ ಅವರ ವಿಭಾಗೀಯ ಪೀಠ ಹೇಳಿದೆ.
ಒಂದು ಅರ್ಜಿಯು ಒಬಿಸಿ ವರ್ಗಗಳ ಮೀಸಲಾತಿಯನ್ನು ಸಾರ್ವಜನಿಕ ಸೇವೆ ಕ್ಷೇತ್ರಗಳಲ್ಲಿ ಶೇ 14ರಿಂದ ಶೇ 27ರಷ್ಟು ಏರಿಸುವಂತೆ ಕೋರಿತ್ತು.