ಹೊಸ ಸ್ಥಿತಿಗತಿ ವರದಿ ಸಲ್ಲಿಸಲು ಮಣಿಪುರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
Supreme Court | Photo:PTI
ಹೊಸದಿಲ್ಲಿ: ಮಣಿಪುರದಲ್ಲಿ ಮೈತೈ ಮತ್ತು ಕುಕಿ ಜನಾಂಗೀಯ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪರಿಷ್ಕೃತ ಸ್ಥಿತಿಗತಿ ವರದಿಯೊಂದನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಎರಡು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವೊಂದು ಈ ಆದೇಶ ನೀಡಿದೆ. ಒಂದು ಅರ್ಜಿಯನ್ನು ಸರಕಾರೇತರ ಸಂಘಟನೆ ಮಣಿಪುರ್ ಟ್ರೈಬಲ್ ಫೋರಮ್ ಸಲ್ಲಿಸಿದೆ. ಅದು ಕುಕಿ ಜನಾಂಗೀಯರಿಗೆ ಸೇನಾ ರಕ್ಷಣೆ ನೀಡಬೇಕೆಂದು ಕೋರಿದೆ.
ಎರಡನೇ ಅರ್ಜಿಯನ್ನು ಭಾರತೀಯ ಜನತಾ ಪಾರ್ಟಿ ಶಾಸಕ ದಿಂಗಾಂಗ್ಲುಂಗ್ ಗ್ಯಾಂಗ್ಮೇಯಿ ಸಲ್ಲಿಸಿದ್ದಾರೆ. ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೋರುವ ಬಹುಸಂಖ್ಯಾತ ಮೆಟಾಯ್ ಸಮುದಾಯದ ಅರ್ಜಿಗಳನ್ನು ಪರಿಶೀಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿ ಮಣಿಪುರ ಹೈಕೋರ್ಟ್ ನೀಡಿರುವ ಆದೇಶವನ್ನು ಅವರು ಈ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಈವರೆಗೆ 120ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಸಾವಿರ ಮಂದಿ ಈಗ ಶಿಬಿರಗಳಲ್ಲಿ ದಿನಗಳೆಯುತ್ತಿದ್ದಾರೆ.
ಸೋಮವಾರ ನಡೆದ ವಿಚಾರಣೆಯ ವೇಳೆ, ಮಣಿಪುರ ಟ್ರೈಬಲ್ ಫೋರಮ್ ಪರವಾಗಿ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್, ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯದಲ್ಲಿ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ ಮತ್ತು ರಾಜ್ಯದಲ್ಲಿನ ಕರ್ಫ್ಯೂವನ್ನು ಈಗ 24 ಗಂಟೆಗಳಿಂದ 5 ಗಂಟೆಗಳಿಗೆ ಇಳಿಸಲಾಗಿದೆ ಎಂದು ಹೇಳಿದರು.
ಕುಕಿಗಳಿಗೆ ರಕ್ಷಣೆ ಒದಗಿಸಬೇಕೆಂದು ಗೊನ್ವಾಲ್ವಿಸ್ ಮನವಿ ಮಾಡಿದರು. ಕುಕಿ ಸಮುದಾಯವನ್ನು ನಿರ್ನಾಮ ಮಾಡುತ್ತೇವೆ ಎಂಬುದಾಗಿ ಹಲವು ಬಂಡುಕೋರ ಗುಂಪುಗಳ ನಾಯಕರು ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಿದ್ದಾರೆ, ಆದರೆ ಅವರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ನುಡಿದರು.
ಕುಕಿ ಸಮುದಾಯದ ಜನರ ವಿರುದ್ಧ ಹಿಂಸಾಚಾರವವನ್ನು ‘‘ಸರಕಾರವೇ ಪ್ರಾಯೋಜಿಸುತ್ತಿದೆ’’ ಎಂದು ಅವರು ಆರೋಪಿಸಿದರು. ಶನಿವಾರ ನಾಲ್ವರನ್ನು ಕೊಲ್ಲಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ‘‘ಕುಕಿ ಜನಾಂಗೀಯರು ಆಕ್ರಮನ ನಡೆಸುತ್ತಿಲ್ಲ. ಅವರು ತಮ್ಮ ರಕ್ಷಣೆಯನ್ನು ಮಾತ್ರ ಮಾಡಿಕೊಳ್ಳುತ್ತಿದ್ದಾರೆ. ಮೆಟಾಯ್ ಜನರು ಗೆರೆ ದಾಟುತ್ತಿದ್ದಾರೆ. ನಮ್ಮ ಕೆಲಸವನ್ನು ಮಾಡಲು ನಮಗೆ ಬಿಡುತ್ತಿಲ್ಲ ಎಂದು ಸೇನೆ ಹೇಳುತ್ತಿದೆ’’ ಎಂದರು. ಇದಕ್ಕೆ ಗೊನ್ಸಾಲ್ವಿಸ್ ‘‘ಕೋಮು ಬಣ್ಣವನ್ನು’’ ಕೊಡಬಾರದು ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಹೇಳಿದರು.
ಪುನರ್ವಸತಿಗಾಗಿ ಮತ್ತು ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿ ಸುಧಾರಣೆಗಾಗಿ ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ವಿವರಿಸಿ ಪರಿಷ್ಕೃತ ಸ್ಥಿತಿಗತಿ ವರದಿಯೊಂದನ್ನು ಸಲ್ಲಿಸುವಂತೆ ನ್ಯಾಯಾಲಯವು ಸಾಲಿಸಿಟರ್ ಜನರಲ್ ಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 10ರಂದು ನಡೆಯಲಿದೆ.