ಕಾವೇರಿ ವಿವಾದ | ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ
ಕಾವೇರಿ ನೀರಿಗಾಗಿ ಸುಪ್ರೀಂಕೋರ್ಟ್ ಮೆಟ್ಟಲೇರಲೂ ಸಿದ್ಧ : ಸ್ಟಾಲಿನ್
ಎಂ.ಕೆ.ಸ್ಟಾಲಿನ್ | PC : PTI
ಚೆನ್ನೈ :ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ)ಯು ಶಿಫಾರಸು ಮಾಡಿದಷ್ಟು ಪ್ರಮಾಣದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆಗೊಳಿಸಲು ಕರ್ನಾಟಕವು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಚೆನ್ನೈನಲ್ಲಿ ಸರ್ವಪಕ್ಷ ಸಭೆ ನಡೆಸಿದ್ದಾರೆ.
ಕಾವೇರಿ ನದಿ ನೀರನ್ನು ಬಿಡುಗಡೆಗೊಳಿಸದೆ ಇರುವ ಕರ್ನಾಟಕ ಸರಕಾರದ ನಿಲುವನ್ನು ಸಭೆಯಲ್ಲಿ ಒಕ್ಕೊರಲಿನಿಂದ ಖಂಡಿಸಲಾಯಿತು ಹಾಗೂ ಅಗತ್ಯ ಬಿದ್ದಲ್ಲಿ ಕಾನೂನು ಹೋರಾಟವನ್ನು ನಡೆಸಲೂ ನಿರ್ಧರಿಸಲಾಯಿತು.
ಕರ್ನಾಟಕದಿಂದ, ತಮ್ಮ ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಕಾವೇರಿ ನೀರನ್ನು ಪಡೆದುಕೊಳ್ಳಲು ಅಗತ್ಯ ಬಿದ್ದಲ್ಲಿ ಸುಪ್ರೀಂ ಕೋರ್ಟ್ನ ಮೆಟ್ಟಲೇರಲು ಕೂಡಾ ತಮಿಳುನಾಡು ಶಾಸಕಾಂಗ ಪಕ್ಷದ ನಾಯಕರು ಸಭೆಯಲ್ಲಿ ನಿರ್ಧರಿಸಿದರು.
ತಮಿಳುನಾಡಿನ ಜಲ ಹಕ್ಕುಗಳನ್ನು ಸಂರಕ್ಷಿಸಲು ತನ್ನ ಸರಕಾರದ ದೃಢನಿರ್ಧಾರವನ್ನು ಸಭೆಯಲ್ಲಿ ಒತ್ತಿ ಹೇಳಿದ ಸ್ಟಾಲಿನ್ ‘‘ ಒಂದು ವೇಳೆ ಕರ್ನಾಟಕವು ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರದ ಸೂಚನೆಯನ್ನು ಅನುಸರಿಸದೆ ಇದ್ದಲ್ಲಿ ತಮಿಳುನಾಡಿಗೆ ನ್ಯಾಯವನ್ನು ಪಡೆದುಕೊಳ್ಳಲು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಲು ನಾವು ಸಿದ್ಧರಾಗಿದ್ದೇವೆ’’ ಎಂದು ಹೇಳಿದರು.
ಕಾವೇರಿ ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್ನ ಆದೇಶಗಳಿಗೆ ಅನುಗುಣವಾಗಿ ತಮಿಳುನಾಡಿಗೆ ನೀರನ್ನು ಬಿಡುಗಡೆಗೊಳಿಸಬೇಕೆಂದು ಕರ್ನಾಟಕಕ್ಕೆ ಆದೇಶವನ್ನು ನೀಡಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೂಡಾ ಸಭೆಯಲ್ಲಿ ಅಂಗೀಕರಿಸಲಾಯಿತು.
ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ವರ್ಷ ಸಾಕಷ್ಟು ಮಳೆಯಾಗಿರುವ ಹೊರತಾಗಿಯೂ ಕರ್ನಾಟಕವು ಸಿಡಬ್ಲ್ಯುಆರ್ಎನ ಶಿಫಾರಸುಗಳನ್ನು ಪಾಲಿಸಲು ನಿರಾಕರಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ತಮಿಳುನಾಡು ತನ್ನ ಕೃಷಿ ಅವಶ್ಯಕತೆಗಳಿಗೆ ತಮಿಳುನಾಡನ್ನು ತೀವ್ರವಾಗಿ ಅವಲಂಭಿಸಿರುವುದನ್ನು ಒತ್ತಿ ಹೇಳಿದ ಸ್ಟಾಲಿನ್, ಕಳೆದ ವರ್ಷ ಕರ್ನಾಟಕವು ಆದೇಶವನ್ನು ಪಾಲನೆ ಮಾಡದೆ ಇದ್ದುದರಿಂದ ತನ್ನ ಪಾಲಿನ ನೀರನ್ನು ಪಡೆಯಲು ತಮಿಳುನಾಡು ಸುಪ್ರೀಂಕೋರ್ಟ್ನ ಮೆಟ್ಟಲೇರಬೇಕಾಯಿತು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈಮುರುಗನ್ ಹಾಗೂ ಎಐಎಡಿಎಂಕೆ, ಕಾಂಗ್ರೆಸ್, ಬಿಜೆಪಿ, ಪಿಎಂಕೆ, ಸಿಪಿಎ, ಸಿಪಿಐ, ಎಂಡಿಎಂಕೆ, ಎಂಎಂಕೆ, ಕೆಡಿಎಂಕೆ ಹಾಗೂ ಟಿವಿಕೆ ಪಕ್ಷಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ತಮಿಳುನಾಡಿಗೆ ಜುಲೈ 31ರವರೆಗೆ ಪ್ರತಿ ದಿನ 1 ಟಿಎಂಸಿ ಅಡಿ ನೀರನ್ನು ಬಿಡುಗಡೆಗೊಳಿಸುವಂತೆ ಕಾವೇರಿ ಜಲನಿಯಂತ್ರಣ ಪ್ರಾಧಿಕಾರವು ಗುರುವಾರ ಕರ್ನಾಟಕಕ್ಕೆ ಆದೇಶಿಸಿತ್ತು. ಆದರೆ ರಾಜ್ಯದಲ್ಲಿ ಸೂಕ್ತ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದ ತಮಿಳುನಾಡಿಗೆ 1 ಟಿಎಂಸಿ ಅಡಿ ನೀರನ್ನು ಬಿಡಲು ಸಾಧ್ಯವಿಲ್ಲವೆಂದು ಕರ್ನಾಟಕಕವು ತಿಳಿಸಿತ್ತು.