ಪಕ್ಷದ ಚಿಹ್ನೆಯಾಗಿ 'ಕಮಲ' ಬಳಸದಂತೆ ಬಿಜೆಪಿಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: 'ಕಮಲ' ಪಕ್ಷದ ಚಿಹ್ನೆಯಾಗಿ ಬಳಸದಂತೆ ಬಿಜೆಪಿಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ.
ನ್ಯಾಯಮೂರ್ತಿ ವಿಕ್ರಮನಾಥ್ ಮತ್ತು ನ್ಯಾಯಮೂರ್ತಿ ಪಿಬಿ ವರಾಳೆ ಅವರ ಪೀಠವು ಈ ಅರ್ಜಿಯನ್ನು ಪ್ರಚಾರ ಪಡೆಯುವ ಉದ್ದೇಶದಿಂದ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿದೆ.
ʼಕಮಲʼ ಹೂವು ಭಾರತದ "ರಾಷ್ಟ್ರೀಯ ಹೂವು" ಆಗಿರುವುದರಿಂದ ಅದನ್ನು ಯಾವುದೇ ರಾಜಕೀಯ ಪಕ್ಷಕ್ಕೆ ನೀಡಲಾಗುವುದಿಲ್ಲ ಮತ್ತು ಅಂತಹ ಹಂಚಿಕೆ ರಾಷ್ಟ್ರೀಯ ಸಮಗ್ರತೆಗೆ ಅವಮಾನ ಎಂದು ಕೋರ್ಟ್ನಲ್ಲಿ ವಾದಿಸಲಾಗಿತ್ತು.
2022ರಲ್ಲಿ ಅರ್ಜಿದಾರರಾದ ಜಯಂತ್ ವಿಪತ್, ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯು ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಪ್ರಕಾರ ನೋಂದಾಯಿತ ರಾಜಕೀಯ ಪಕ್ಷಕ್ಕೆ ಲಭ್ಯವಿರುವ ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಿಲ್ಲ ಎಂದು ಪ್ರತಿಪಾದಿಸಿ ಸಿವಿಲ್ ಮೊಕದ್ದಮೆಯನ್ನು ಸಲ್ಲಿಸಿದ್ದರು. ಇದಲ್ಲದೆ ʼಕಮಲʼ ಚಿಹ್ನೆಯನ್ನು ಪಕ್ಷದ ಚಿಹ್ನೆಯಾಗಿ ಬಿಜೆಪಿ ಬಳಸುವುದನ್ನು ತಡೆಯಲು ಅವರು ಶಾಶ್ವತ ತಡೆಯಾಜ್ಞೆಯನ್ನು ಕೂಡ ಕೋರಿದ್ದರು.
ತಾಂತ್ರಿಕ ಕಾರಣಗಳಿಗಾಗಿ ಅ.2023ರಲ್ಲಿ ಸಿವಿಲ್ ನ್ಯಾಯಾಲಯ ಮೊಕದ್ದಮೆಯನ್ನು ರದ್ದುಗೊಳಿಸಿತ್ತು. ಇದರ ಬಳಿಕ ವಿಪತ್ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಅವರ ಅರ್ಜಿಯನ್ನು ಹೈಕೋರ್ಟ್ ಕೂಡ ತಿರಸ್ಕರಿಸಿತ್ತು. ಆ ಬಳಿಕ ಅವರು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು