ಸುಪ್ರೀಂ ಕೋರ್ಟ್ | ದಲಿತ ಯುವಕ- ವಣ್ಣಿಯಾರ್ ಯುವತಿಯ ಹಂತಕರಿಗೆ ಜೀವಾವಧಿ ಖಾಯಂ ; ಮರ್ಯಾದೆಗೇಡು ಕೃತ್ಯ ಎಂದ ನ್ಯಾಯಾಲಯ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ತಮ್ಮ ಪುತ್ರಿ ದಲಿತ ಸಮುದಾಯದ ಯುವಕನನ್ನು ವಿವಾಹವಾಗಿದ್ದರಿಂದ ವ್ಯಗ್ರಗೊಂಡು, 2003ರಲ್ಲಿ ತಮಿಳುನಾಡಿನ ಕುದ್ದಲೋರ್ ಜಿಲ್ಲೆಯಲ್ಲಿ ಅವರಿಬ್ಬರನ್ನೂ ಮರ್ಯಾದಾ ಹತ್ಯೆಗೈದಿದ್ದ ಯುವತಿಯ ತಂದೆಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಸುಧಾಂಶು ಧುಲಿಯಾ ಹಾಗೂ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾವರನ್ನು ಒಳಗೊಂಡಿದ್ದ ನ್ಯಾಯಪೀಠ, ಅಪರಾಧ ಕೃತ್ಯದ ಆಳವಾದ ಬೇರು ಭಾರತದಲ್ಲಿನ ಪರಂಪರಾಗತ ಜಾತಿ ವ್ಯವಸ್ಥೆಯಲ್ಲಿ ಅಡಗಿದೆ. ಈ ತೀವ್ರ ಮರ್ಯಾದೆಗೇಡು ಕೃತ್ಯವನ್ನು ಮರ್ಯಾದಾ ಹತ್ಯೆ ಎಂದು ಕರೆಯಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿತು.
“ನಾವು ಈಗಷ್ಟೆ ವಿಚಾರಣೆ ನಡೆಸಿದ ಈ ಕುಟಿಲ ಹಾಗೂ ಅಸಹ್ಯಕರ ಅಪರಾಧವು ನಮ್ಮ ಜಾತಿ ವ್ಯವಸ್ಥೆಯೊಳಗೆ ಆಳವಾಗಿ ಬೇರು ಬಿಟ್ಟಿರುವ ಕೊಳಕು ವಾಸ್ತವವಾಗಿದೆ. ಮರ್ಯಾದಾ ಹತ್ಯೆ ಎಂದು ಕರೆಯಲಾಗುವ ಈ ಅಪರಾಧ ಕೃತ್ಯಗಳು ಬಲಿಷ್ಠ ಶಿಕ್ಷೆಯ ಕ್ರಮಗಳಿಗೆ ಒಳಗಾಗಲೇಬೇಕಿದೆ” ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಈ ಸಂಬಂಧ ಯುವತಿಯ ಕುಟುಂಬದ ಸದಸ್ಯರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದ ನ್ಯಾಯಾಲಯ, ಈ ಪ್ರಕರಣವು ಕೇವಲ 20 ವರ್ಷದ ಆಸುಪಾಸು ಹರೆಯದವರಾಗಿದ್ದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಬಿಇ ಪದವೀಧರ ಮುರುಗೇಶನ್ ಹಾಗೂ ಬಿಕಾಂ ಪದವೀಧರೆ ಕನ್ನಗಿಯೆಂಬ ಯುವ ದಂಪತಿಗಳ ಹೇಯ ಹತ್ಯೆಗೆ ಸಂಬಂಧಿಸಿದ್ದಾಗಿದೆ. ಈ ಇಬ್ಬರಿಗೂ ಅಸಂಖ್ಯಾತ ಗ್ರಾಮಸ್ಥರರೆದುರೇ ವಿಷವುಣಿಸಲಾಗಿತ್ತು ಎಂದು ಹೇಳಿದೆ.
“ಈ ಹೇಯ ಕೃತ್ಯದ ಹಿಂದಿದ್ದ ಸೂತ್ರಧಾರರು ಹಾಗೂ ಪ್ರಮುಖ ಸಂಚುಕೋರರು ಬೇರಾರೂ ಆಗಿರಲಿಲ್ಲ; ಸ್ವತಃ ಮೃತ ಯುವತಿ ಕನ್ನಗಿಯ ತಂದೆ ಹಾಗೂ ಸಹೋದರನೇ ಆಗಿದ್ದರು. ಈ ಹತ್ಯೆಗಿದ್ದ ಕಾರಣ, ವಣ್ಣಿಯಾರ್ ಸಮುದಾಯದ ಯುವತಿಯಾದ ಕನ್ನಗಿ, ಅದೇ ಗ್ರಾಮದ ದಲಿತ ಸಮುದಾಯದ ಯುವಕ ಮುರುಗೇಶನ್ ರನ್ನು ವಿವಾಹವಾಗುವ ಧೈರ್ಯ ಪ್ರದರ್ಶಿಸಿದ್ದು” ಎಂದು ನ್ಯಾಯಪೀಠ ಹೇಳಿದೆ.
ಇದೇ ವೇಳೆ, ಪ್ರಾಸಿಕ್ಯೂಷನ್ ಪರ ಸಾಕ್ಷಿದಾರರು ನೀಡಿರುವ ಸಾಕ್ಷ್ಯವು ವಿಶ್ವಾಸಾರ್ಹವಲ್ಲ ಹಾಗೂ ಈ ಪ್ರಕರಣವನ್ನು ಯಾವುದೇ ಸಮರ್ಥನೀಯ ಅನುಮಾನದಾಚೆ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ವಾದಿಸಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 11 ಮಂದಿ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.