ಉದ್ಯೋಗದಿಂದ ಕೈಬಿಡಲು ಮಹಿಳೆಯೊಬ್ಬಳ ಮದುವೆ ಕಾರಣವಾಗಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಸಂತ್ರಸ್ತೆಗೆ ರೂ. 60 ಲಕ್ಷ ಪಾವತಿಸುವಂತೆ ಕೇಂದ್ರಕ್ಕೆ ಆದೇಶಿಸಿದ ನ್ಯಾಯಾಲಯ
ಹೊಸದಿಲ್ಲಿ: ಮಹಿಳಾ ಉದ್ಯೋಗಿಗಳ ವಿವಾಹ ಮತ್ತು ಕುಟುಂಬ ನಡೆಸುವುದು ಅವರನ್ನು ಉದ್ಯೋಗದಿಂದ ತೆಗೆದುಹಾಕಲು ಕಾರಣವಾಗುವ ಯಾವುದೇ ಕಾನೂನು ಅಸಂವಿಧಾನಿಕ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಮಿಲಿಟರಿ ನರ್ಸಿಂಗ್ ಸೇವೆಯ ಖಾಯಂ ಅಧಿಕಾರಿಯನ್ನು 1988ರಲ್ಲಿ ಅವರು ವಿವಾಹವಾದ ನಂತರ ಕೆಲಸದಿಂದ ಬಿಡುಗಡೆಗೊಳಿಸಿರುವುದಕ್ಕೆ ಅವರಿಗೆ ರೂ 60 ಲಕ್ಷ ಪಾವತಿಸುವಂತೆ ಕೇಂದ್ರಕ್ಕೆ ಆದೇಶಿಸಿದೆ.
“ಇಂತಹ ಪುರುಷ ಪ್ರಧಾನ ನಿಯಮವನ್ನು ಒಪ್ಪಿಕೊಳ್ಳುವುದು ಮನುಷ್ಯರ ಘನತೆ ಮತ್ತು ತಾರತಮ್ಯಕ್ಕೊಳಗಾಗದೇ ಇರುವ ಹಕ್ಕನ್ನು ಗೌಣವಾಗಿಸಿದಂತೆ,” ಎಂದು ಅರ್ಜಿದಾರೆಯ ಪುನಃಸ್ಥಾಪನೆಗೆ ಸೇನಾ ಪಡೆಗಳ ಟ್ರಿಬ್ಯುನಲ್ ಹೊರಡಿಸಿದ್ದ ಅದೇಶವನ್ನು ಪ್ರಶ್ನಿಸಿ ಕೇಂದ್ರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಹೇಳಿದೆ.
ಮಹಿಳೆಯ 26 ವರ್ಷ ಅವಧಿಯ ಕಾನೂನು ಹೋರಾಟಕ್ಕೆ ಅಂತ್ಯ ಹಾಡಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರ ಪೀಠ, ಲೆಫ್ಟಿನೆಂಟ್ ಸೆಲಿನಾ ಜಾನ್ ಅವರಿಗೆ ಎಲ್ಲಾ ಕ್ಲೈಮ್‌ಗಳ ಪೂರ್ಣ ಸೆಟ್ಲ್‌ಮೆಂಟ್ ನೀಡುವಂತೆ ಹೇಳಿದೆ.
“ಮಿಲಿಟರಿ ನರ್ಸಿಂಗ್ ಸೇವೆಯ ಖಾಯಂ ಆಯೋಗಗಳ ನೀಡಿಕೆಗೆ ಇರುವ ನಿಯಮಗಳು ಮತ್ತು ಷರತ್ತುಗಳನ್ನು ಮುಂದಿಟ್ಟುಕೊಂಡು ಆಕೆಯನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿತ್ತು.
ಆಕೆಯನ್ನು 1985ರಲ್ಲಿ ಲೆಫ್ಟಿನೆಂಟ್ ರ‍್ಯಾಂಕ್ ನೊಂದಿಗೆ ಸೆಕುಂದರಾಬಾದ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು 1988ರಲ್ಲಿ ಆಕೆಗೆ ಸೇನಾಧಿಕಾರಿಯೊಬ್ಬರೊಂದಿಗೆ ವಿವಾಹವಾಗಿತ್ತು. ಅದೇ ವರ್ಷದ ಆಗಸ್ಟ್ 27ರಂದು ಆಕೆಯನ್ನು ಸೇವೆಯಿಂದ ಯಾವುದೇ ನೋಟೀಸ್ ನೀಡದೆ ಬಿಡುಗಡೆಗೊಳಿಸಲಾಗಿತ್ತು.