ಸುಪ್ರೀಂ ಕೋರ್ಟ್ ಮತ್ತೆ ಜನರ ನ್ಯಾಯಾಲಯವಾಗುವ ಅಗತ್ಯವಿದೆ: ನ್ಯಾ.ಎಂ.ಬಿ. ಲೋಕೂರ್
ನ್ಯಾ.ಎಂ.ಬಿ.ಲೋಕೂರ್ (Photo: PTI)
ಹೊಸದಿಲ್ಲಿ: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಕ್ಷಮಾಪಣೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದಾಗ ಮಾಧ್ಯಮ ವರದಿಗಳು ಮತ್ತು ವ್ಯಾಖ್ಯಾನಕಾರರು ನ್ಯಾಯಾಂಗದಲ್ಲಿ ನಂಬಿಕೆಯು ಮರುಸ್ಥಾಪನೆಗೊಳ್ಳುತ್ತಿದೆ ಎಂದು ಹೇಳಿದ್ದರು. ಈ ‘ಮರುಸ್ಥಾಪನೆ’ ಪದವು ಬಳಕೆಯಾದಾಗ ಅದು ನಂಬಿಕೆ ನಷ್ಟಗೊಂಡಿತ್ತು ಎನ್ನುವುದನ್ನು ಸೂಚಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಎಂ.ಬಿ.ಲೋಕೂರ್ ಅವರು ಹೇಳಿದ್ದಾರೆ.
17ನೇ ಜೈಪುರ ಸಾಹಿತ್ಯೋತ್ಸವದ ನೇಪಥ್ಯದಲ್ಲಿ ಸುದ್ದಿ ಜಾಲತಾಣ ‘ದಿ ಕ್ವಿಂಟ್’ಗೆ ನೀಡಿದ ಸಂದರ್ಶನದಲ್ಲಿ ನ್ಯಾ.ಲೋಕೂರ್ ಅವರು ಭಾರತೀಯ ನ್ಯಾಯಾಂಗದ ಸ್ಥಿತಿ,370ನೇ ವಿಧಿಯ ರದ್ದತಿ ಕುರಿತು ತನ್ನ ಅತೃಪ್ತಿ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದರು.
ಅವರ ಸಂದರ್ಶನದ ಆಯ್ದ ಕೆಲವು ಭಾಗಗಳು ಇಲ್ಲಿವೆ:
ಇತ್ತೀಚಿನ ದಿನಗಳಲ್ಲಿ ಹಲವಾರು ವೇದಿಕೆಗಳಲ್ಲಿ 370ನೇ ವಿಧಿಯ ರದ್ದತಿ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ನೀವು ಅತೃಪ್ತಿ ವ್ಯಕ್ತಪಡಿಸಿದ್ದೀರಿ. ಅತೃಪ್ತಿ ಏಕೆ?
-ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಬಹುದೇ ಎಂಬ ಅತ್ಯಂತ ಪ್ರಮುಖ ಪ್ರಶ್ನೆಗೆ ಸರ್ವೋಚ್ಚ ನ್ಯಾಯಾಲಯವು ಉತ್ತರಿಸಿಲ್ಲ. ಪ್ರಶ್ನೆಯು ನೇರವಾಗಿ ಉದ್ಭವಿಸಿತ್ತು ಮತ್ತು ಉತ್ತರಿಸಲು ಅದು ಅತ್ಯುತ್ತಮ ಅವಕಾಶವಾಗಿತ್ತು. ಈ ಅವಕಾಶ ಮತ್ತೆ ಬರದಿರಲಿ ಎಂದು ನಾನು ಆಶಿಸುತ್ತೇನೆ,ಏಕೆಂದರೆ ಅದು ಇನ್ನೊಂದು ರಾಜ್ಯವು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲ್ಪಡುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಸರ್ವೋಚ್ಚ ನ್ಯಾಯಾಲಯವು ಈ ಪ್ರಶ್ನೆಗೆ ಉತ್ತರಿಸಬೇಕಿತ್ತು.
ರಾಜ್ಯ ಸ್ಥಾನಮಾನದ ಪ್ರಶ್ನೆಯಲ್ಲಿ ಸ್ಪಷ್ಟತೆಯ ಕೊರತೆಯ ಹೊರತಾಗಿ ಇತರ ಯಾವುದೇ ಕಾರಣಗಳಿದ್ದವೇ?
-ಅಸ್ತಿತ್ವದಲ್ಲಿದ್ದ ವಿಧಿ 370ರ ರದ್ದತಿಯನ್ನು ಎತ್ತಿ ಹಿಡಿಯುವಲ್ಲಿ ಮತ್ತು ಹೊಸ ವಿಧಿ 370ನ್ನು ತರುವಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ತಾರ್ಕಿಕತೆಯು ನನಗೆ ಸಮಾಧಾನವನ್ನುಂಟು ಮಾಡಿಲ್ಲ.
ನೂರಾರು ಪುಟಗಳಷ್ಟು ಸುದೀರ್ಘ ತೀರ್ಪುಗಳನ್ನು ಬರೆಯುವ ಪ್ರವೃತ್ತಿಯೂ ಇದೆ. ವಿಧಿ 370ರ ಪ್ರಕರಣದಲ್ಲಿ ಇಷ್ಟೊಂದು ಸುದೀರ್ಘ ತೀರ್ಪು ಬರೆಯುವ ಅಗತ್ಯವಿರಲಿಲ್ಲ ಎಂದು ನಾನು ಭಾವಿಸಿದ್ದೇನೆ.
‘ಎಲ್ಲ ನ್ಯಾಯಾಧೀಶರು ಸಮಾನರಾಗಿದ್ದರೆ ಕೆಲವು ರೀತಿಯ ಪ್ರಕರಣಗಳು ನಿರ್ದಿಷ್ಟ ನ್ಯಾಯಾಧೀಶರಿಗೇ ಏಕೆ ವಹಿಸಲ್ಪಡುತ್ತವೆ ?’ ಎಂದು ಹಳೆಯ ಸಂದರ್ಶನವೊಂದರಲ್ಲಿ ನೀವು ಹೇಳಿದ್ದೀರಿ. ಅದನ್ನು ವಿವರಿಸುತ್ತೀರಾ?
-ಕೆಲವು ರೀತಿಯ ಪ್ರಕರಣಗಳು ನಿರ್ದಿಷ್ಟ ನ್ಯಾಯಾಧೀಶರಿಗೇ ವಹಿಸಲ್ಪಡುತ್ತವೆ ಎಂಬ ಗ್ರಹಿಕೆಯಿದೆ. ಈ ಗ್ರಹಿಕೆ ಇತ್ತೀಚಿನದಲ್ಲ. ತುಂಬ ಸಮಯದಿಂದಲೂ ಈ ಗ್ರಹಿಕೆಯಿದೆ,ಬಹುಶಃ ಐದಾರು ವರ್ಷಗಳಿಂದ. ಅದು ಹಾಗೆ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ.
ರಾಜಕೀಯವಾಗಿ ಅಥವಾ ಇತರ ದೃಷ್ಟಿಯಿಂದ ಸೂಕ್ಷ್ಮವಾಗಿರುವ ನಿರ್ದಿಷ್ಟ ರೀತಿಯ ಪ್ರಕರಣವನ್ನು ವಿಚಾರಣೆ ನಡೆಸಲು ನಿರ್ದಿಷ್ಟ ನ್ಯಾಯಾಧೀಶರನ್ನು ಆಯ್ಕೆ ಮಾಡಬಾರದು. ಹಾಗೆ ಮಾಡಿದರೆ,ಈ ರೀತಿಯ ಪ್ರಕರಣಗಳನ್ನು ನಿರ್ಧರಿಸಲು ಈ ನಿರ್ದಿಷ್ಟ ನ್ಯಾಯಾಧೀಶರನ್ನೇ ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.
ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ತನ್ನ ವಜ್ರ ಮಹೋತ್ಸವವನ್ನು ಆಚರಿಸಿದೆ. ಈ ಘಟ್ಟದಲ್ಲಿ ಏನನ್ನು ಬದಲಿಸುವ ಅಥವಾ ಇನ್ನಷ್ಟು ಉತ್ತಮಗೊಳಿಸುವ ಅಗತ್ಯವಿದೆ?
-ತುಂಬ ಹಿಂದೇನಲ್ಲ,ಸರ್ವೋಚ್ಚ ನ್ಯಾಯಾಲಯವು ‘ಜನರ ನ್ಯಾಯಾಲಯ ’ಎಂದು ಹೆಸರಾಗಿದ್ದ ಕಾಲವೊಂದಿತ್ತು. ಸುಪ್ರೀಂ ಕೋರ್ಟ್ ಜನರ ನ್ಯಾಯಾಲಯವಾಗಿದೆ ಎಂದು ಈ ದೇಶದ ಪ್ರಜೆಗಳು ಹೆಮ್ಮೆಯಿಂದ ಹೇಳುವ ಆ ಸ್ಥಾನಕ್ಕೆ ಅಥವಾ ಆ ಸ್ಥಿತಿಗೆ ನಾವು ಮರಳಬೇಕಿದೆ ಎಂದು ನಾನು ಭಾವಿಸಿದ್ದೇನೆ. ಅದು ಅಗತ್ಯವಾಗಿರುವ ಅತ್ಯಂತ ದೊಡ್ಡ ಸುಧಾರಣೆ ಎಂದು ನಾನು ಭಾವಿಸಿದ್ದೇನೆ.