ಜೆಟ್ ಏರ್ವೇಸ್ ಆಸ್ತಿಗಳ ಹರಾಜಿಗೆ ಸುಪ್ರೀಂಕೋರ್ಟ್ ಆದೇಶ
ವಾಯುಯಾನ ಸಂಸ್ಥೆಯ ಮಾಲಕತ್ವ ವರ್ಗಾವಣೆಗೂ ನ್ಯಾಯಪೀಠ ನಕಾರ
ಜೆಟ್ ಏರ್ವೇಸ್ | PTI
ಹೊಸದಿಲ್ಲಿ : ತನ್ನ ವಿಶೇಷ ಸಾಂವಿಧಾನಿಕ ಅಧಿಕಾರವನ್ನು ಗುರುವಾರ ಬಳಸಿಕೊಂಡ ಸುಪ್ರೀಂಕೋರ್ಟ್, ಮುಚ್ಚುಗಡೆಗೊಂಡಿರುವ ವಾಯುಯಾನ ಸಂಸ್ಥೆ ಜೆಟ್ ಏರ್ವೇಸ್ ನ ಆಸ್ತಿಗಳ್ನು ಹರಾಜು ಹಾಕುವಂತೆ ಆದೇಶ ನೀಡಿದೆ.
ಎಟ್ ಏರ್ವೇಸ್ ನ ಪರಿಹಾರ ಯೋಜನೆಯನ್ನು ಎತ್ತಿಹಿಡಿದ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ (ಎನ್ಸಿಎಲ್ಎಟಿ)ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ತಳ್ಳಿಹಾಕಿದೆ ಹಾಗೂ ಕಂಪೆನಿಯ ಮಾಲಕತ್ವವನ್ನು ಜಲಾನ್ ಕಾಲ್ರೋಕ್ ಕನ್ಸೋರ್ಟಿಯಂ (ಜೆಕೆಸಿ)ಗೆ ವರ್ಗಾಯಿಸಲು ಎನ್ಸಿಎಲ್ಎಟಿ ನೀಡಿದ್ದ ಅನುಮೋದನೆಯನ್ನು ಕೂಡ ಅದು ತಿರಸ್ಕರಿಸಿದೆ.
ನ್ಯಾಯಪೀಠದ ತೀರ್ಪನ್ನು ಪ್ರಕಟಿಸಿದ ನ್ಯಾಯಮೂರ್ತಿ ಪರ್ದಿವಾಲಾ ಅವರು ಜೆಕೆಸಿ ಪರವಾಗಿ ಜೆಟ್ಏರ್ವೇಸ್ನ ಪರಿಹಾರ ಯೋಜನೆಯನ್ನು ಎತ್ತಿಹಿಡಿದ ಎನ್ಸಿಎಲ್ಎಟಿಯ ತೀರ್ಪಿನ ವಿರುದ್ಧ ಎಸ್ ಬಿ ಐ ಮತ್ತಿತರ ಸಾಲದಾತರು ಮನವಿ ಸಲ್ಲಿಸುವುದಕ್ಕೆ ಅವಕಾಶ ನೀಡಿದರು.
ಜೆಟ್ ಏರ್ವೇಸ್ ನ ಸಾಲದಾತರು, ಉದ್ಯೋಗಿಗಳು ಮತ್ತಿತರ ಹಿತಧಾರಕರ ಹಿತಾಸಕ್ತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವಾಯುಯಾನ ಸಂಸ್ಥೆಯ ಆಸ್ತಿಯ ಹರಾಜಿಗೆ ಆದೇಶಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಜೆಟ್ ಏರ್ ವೇಸ್ ನ ಪರಿಹಾರ ಯೋಜನೆಯನ್ನು ಅನುಮೋದಿಸಿದ ಎನ್ಸಿಎಲ್ಎಟಿಯ ನಿರ್ಧಾರವನ್ನು ಸುಪ್ರೀಂಕೋರ್ಟ್ ತರಾಟೆಗೆತ್ತಿಕೊಂಡಿತು.
ಸಂವಿಧಾನದ 142ನೇ ವಿಧಿಯಡಿ ತನಗೆ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ತನ್ನ ಮುಂದೆ ವಿಚಾರಣೆಗೆ ಬಂದಿರುವ ಯಾವುದೇ ವಿಷಯದಲ್ಲಿ ಸಂಪೂರ್ಣ ನ್ಯಾಯವನ್ನು ಖಾತರಿಪಡಿಸಲು ಆದೇಶ ಹಾಗೂ ತೀರ್ಪುಗಳನ್ನು ನೀಡುವ ಅಧಿಕಾರವನ್ನು ಅದು ಹೊಂದಿದೆ.
ಮುಚ್ಚುಗಡೆ ಗೊಂಡಿರುವ ಜೆಟ್ ಏರ್ ವೇಸ್ ಸಂಸ್ಥೆಯು ರೂಪಿಸಿರುವ ಪರಿಹಾರ ಯೋಜನೆಯನ್ನು ಎನ್ ಸಿ ಎಲ್ ಎಟಿ ಮಾರ್ಚ್ 12ರಂದು ನೀಡಿದ ತೀರ್ಪಿನಲ್ಲಿ ಎತ್ತಿಹಿಡಿದಿತ್ತು ಹಾಗೂ ಕಂಪೆನಿಯ ಮಾಲಕತ್ವವನ್ನು ಜೆಕೆಸಿಗೆ ವರ್ಗಾಯಿಸಲು ಅನುಮೋದನೆಯನ್ನು ನೀಡಿತ್ತು.
ಎನ್ಸಿಎಲ್ಎಟಿಯ ತೀರ್ಪನ್ನು ಎಸ್ಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಾಗೂ ಜೆಸಿ ಫ್ಲವರ್ಸ್ ಅಸೆಟ್ ರೀಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಪ್ರಶ್ನಿಸಿದ್ದವು.