ಅಲಿಘರ್ ಮುಸ್ಲಿಂ ವಿವಿ ʼಅಲ್ಪಸಂಖ್ಯಾತ ಸ್ಥಾನಮಾನʼ ಯಾರು ಸ್ಥಾಪಿಸಿದರು ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ʼಅಲ್ಪಸಂಖ್ಯಾತ ಸ್ಥಾನಮಾನʼ ಪರಿಶೀಲಿಸಲು ಹೊಸ ಪೀಠ ರಚನೆಗೆ ಹಾದಿ ಮಾಡಿಕೊಟ್ಟ ಸುಪ್ರೀಂ ಕೋರ್ಟ್ ತೀರ್ಪು
ಹೊಸದಿಲ್ಲಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ (AMU) ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ 7 ನ್ಯಾಯಾಧೀಶರ ಪೀಠ 4:3 ಬಹುಮತದ ತೀರ್ಪನ್ನು ನೀಡಿದ್ದು, 1967ರ ಅಝೀಝ್ ಬಾಷಾ vs ಯೂನಿಯನ್ ಆಫ್ ಇಂಡಿಯಾದ ತೀರ್ಪನ್ನು ರದ್ದುಗೊಳಿಸಿದೆ. ಅಲಿಘರ್ ಮುಸ್ಲಿಂ ವಿವಿ ʼಅಲ್ಪಸಂಖ್ಯಾತ ಸ್ಥಾನಮಾನʼ ಯಾರು ಸ್ಥಾಪಿಸಿದರು ಎಂಬುದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೇಳಿದೆ.
ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದವರು ಯಾರು ಮತ್ತು ಅದರ ಹಿಂದಿನ ಕರ್ತೃ ಯಾರು ಎಂಬುದನ್ನು ನ್ಯಾಯಾಲಯವು ಪರಿಶೀಲಿಸಬೇಕು. ಪರಿಶೀಲನೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಸ್ಥಾಪಿಸಿರುವುದು ಬಯಲಾದರೆ, ಸಂಸ್ಥೆಯು 30ನೇ ವಿಧಿಯ ಪ್ರಕಾರ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಪೀಠವು ಹೇಳಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯವು ಅಲ್ಪಸಂಖ್ಯಾತ ಸಂಸ್ಥೆಯೇ ಎಂಬ ವಿಷಯವನ್ನು ಈಗ ನಿರ್ಧರಿಸಲು ಸಾಮಾನ್ಯ ಪೀಠಕ್ಕೆ ಅವಕಾಶ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಎಸ್ಸಿ ಶರ್ಮಾ ಅವರ ಭಿನ್ನಾಭಿಪ್ರಾಯಗಳೊಂದಿಗೆ ಈ ಮಹತ್ವದ ತೀರ್ಪು ನೀಡಿದೆ.
ಈ ತೀರ್ಪಿನ ಪ್ರಕಾರ, AMU ಅಲ್ಪಸಂಖ್ಯಾತ ಸ್ಥಾನಮಾನದ ಮೌಲ್ಯಮಾಪನ ಮಾಡಲು ಮತ್ತು 2006ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಮರುಮೌಲ್ಯಮಾಪನ ಮಾಡಲು ಮುಖ್ಯ ನ್ಯಾಯಾಧೀಶರು ಹೊಸ ಪೀಠವನ್ನು ರಚಿಸಲಿದ್ದಾರೆ.
ಎಎಂಯು ಕೇಂದ್ರೀಯ ಕಾನೂನು ಮೂಲಕ ಸ್ಥಾಪಿತಗೊಂಡಿರುವುದರಿಂದ ಇದನ್ನು ಅಲ್ಪಸಂಖ್ಯಾತರ ಸಂಸ್ಥೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ಐವರು ಸದಸ್ಯರ ಪೀಠವು 1967ರಲ್ಲಿ ತೀರ್ಪು ನೀಡಿತ್ತು. 1981ರಲ್ಲಿ ಸಾಂವಿಧಾನಿಕ ತಿದ್ದುಪಡಿ ಮೂಲಕ ಅಂದಿನ ಕೇಂದ್ರ ಸರ್ಕಾರವು ಎಎಂಯುಗೆ ‘ಅಲ್ಪಸಂಖ್ಯಾತ’ ಸ್ಥಾನಮಾನ ನೀಡಿತ್ತು. ಅಲಹಾಬಾದ್ ಹೈಕೋರ್ಟ್ ಈ ಸ್ಥಾನಮಾನವನ್ನು ರದ್ದುಪಡಿಸಿ 2006ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.