ಅದಾನಿ ಪವರ್ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡದ ತನ್ನ ರಿಜಿಸ್ಟ್ರಿಗೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ: ನ್ಯಾಯಾಂಗದ ಆದೇಶವಿದ್ದರೂ ಅದಾನಿ ಪವರ್‌ಗೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡದ್ದಕ್ಕಾಗಿ ತನ್ನ ರಿಜಿಸ್ಟ್ರಿಯನ್ನು ಸರ್ವೋಚ್ಚ ನ್ಯಾಯಾಲಯವು ತರಾಟೆಗೆತ್ತಿಕೊಂಡಿದೆ.
ರಾಜಸ್ಥಾನ ಸರಕಾರದ ಸ್ವಾಮ್ಯದ ಜೈಪುರ ವಿದ್ಯುತ್ ವಿತರಣ ನಿಗಮ ಲಿ.(ಜೆವಿವಿಎನ್‌ಎಲ್) ಪರ ಹಿರಿಯ ನ್ಯಾಯವಾದಿ ದುಷ್ಯಂತ ದವೆಯವರು ಮಂಗಳವಾರ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಪಿ.ವಿ.ಸಂಜಯಕುಮಾರ್ ಅವರ ಪೀಠದ ಎದುರು ಈ ವಿಷಯವನ್ನು ಪ್ರಸ್ತಾವಿಸಿ,ಪ್ರಕರಣವನ್ನು ಪಟ್ಟಿ ಮಾಡದಂತೆ ತನಗೆ ಸೂಚನೆಯಿದೆ ಎಂದು ರಿಜಿಸ್ಟ್ರಿ ತಿಳಿಸಿದೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯವು 2020ರಲ್ಲಿ ಮುಖ್ಯ ಪ್ರಕರಣದಲ್ಲಿ ತೀರ್ಪು ನೀಡಿದ್ದರೂ ಅದಾನಿ ಗ್ರೂಪ್‌ಗೆ ಸೇರಿದ ಅದಾನಿ ಪವರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂಬ ಜೆವಿವಿಎನ್‌ಎಲ್ ಆರೋಪಗಳಿಗೆ ಪ್ರಸ್ತುತ ಪ್ರಕರಣವು ಸಂಬಂಧಿಸಿದೆ.
ಅದಾನಿ ಪವರ್ ಜೆವಿವಿಎನ್‌ಎಲ್‌ನಿಂದ ವಿಳಂಬ ಪಾವತಿ ಮೇಲ್ತೆರಿಗೆಯನ್ನು ಪಡೆಯುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು 2020ರಲ್ಲಿ ತೀರ್ಪು ನೀಡಿತ್ತು. ನಂತರ ಜೆವಿವಿಎನ್‌ಎಲ್ ಸಂಪೂರ್ಣ ಬಾಕಿಯನ್ನು ಅದಾನಿ ಪವರ್‌ಗೆ ಪಾವತಿಸಿತ್ತು.
ಜೆವಿವಿಎನ್‌ಎಲ್ 2022,ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯ ಮಹಾ ಕಾರ್ಯದರ್ಶಿಗಳಿಗೆ ಬರೆದಿದ್ದ ಪತ್ರದಲ್ಲಿ ತೀರ್ಪು ಹೊರಬಿದ್ದ ಎರಡು ವರ್ಷಗಳ ಬಳಿಕ ವಿಷಯವನ್ನು ವಿಚಾರಣೆಗೆ ಪಟ್ಟಿ ಮಾಡಿದ್ದು 2020ರ ತೀರ್ಪಿನ ಪುನರ್‌ಪರಿಶೀಲನೆಗೆ ಸ್ಪಷ್ಟ ಪ್ರಯತ್ನವಾಗಿದೆ ಎಂದು ತಿಳಿಸಿತ್ತು. ತೀರ್ಪಿನ ಪುನರ್‌ಪರಿಶೀಲನೆ ಕೋರಿ ಜೆವಿವಿಎನ್‌ಎಲ್ 2021ರಲ್ಲಿ ಅರ್ಜಿ ಸಲ್ಲಿಸಿತ್ತು,ಆದರೆ ಅದಾನಿ ಪವರ್ ಇಂತಹ ಯಾವುದೇ ಅರ್ಜಿಗಳನ್ನು ಸಲ್ಲಿಸಿರಲಿಲ್ಲ ಎಂದೂ ಅದು ಹೇಳಿತ್ತು.
ಮಂಗಳವಾರ ವಿಷಯವನ್ನು ಪ್ರಸ್ತಾಪಿಸಿದ ದವೆ, ಅದಾನಿ ಪವರ್ ವಿರುದ್ಧದ ಪ್ರಕರಣವನ್ನು ಪಟ್ಟಿ ಮಾಡುವಲ್ಲಿ ರಿಜಿಸ್ಟ್ರಿಯ ವೈಫಲ್ಯವು ಅತ್ಯಂತ ಕಳವಳಕಾರಿಯಾಗಿದೆ. ಅದನ್ನು ಪಟ್ಟಿ ಮಾಡದಂತೆ ತನಗೆ ನಿರ್ದೇಶನವಿದೆ ಎಂದು ಸಹಾಯಕ ರಿಜಿಸ್ಟ್ರಾರ್ ಬಹಳ ಧೈರ್ಯದಿಂದ ಹೇಳಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು,ಯಾಕೆ? ಯಾರ ಆಜ್ಞೆಯ ಮೇರೆಗೆ? ಹಾಗೆ ನಿರ್ದೇಶಿಸಿದ್ದು ಯಾರು ಎಂದು ಪ್ರಶ್ನಿಸಿತು.
ಅದು ತನಗೆ ಗೊತ್ತಿಲ್ಲ ಎಂದು ಹೇಳಿದ ದವೆ,ಸರಕಾರವು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದಾಗ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಆದರೆ ರಿಜಿಸ್ಟ್ರಿಯು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದಾಗ ಅದನ್ನು ಗಂಭೀರವಾಗಿ ಪರಿಗಣಿಸಬೇಕಲ್ಲವೇ ಎಂದು ಕೇಳಿದರು.
ತಾನು ಈ ವಿಷಯದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ ಪೀಠವು,ಬುಧವಾರ ಪ್ರಕರಣವನ್ನು ಎಲ್ಲಕ್ಕಿಂತ ಮೊದಲು ವಿಚಾರಣೆಗೆ ಪಟ್ಟಿ ಮಾಡುವಂತೆ ನಿರ್ದೇಶನ ನೀಡಿತು.