ತೇಜಸ್ವಿ ಯಾದವ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ತೇಜಸ್ವಿ ಯಾದವ್ | Photo: PTI
ಹೊಸದಿಲ್ಲಿ: ಗುಜರಾತಿಗಳನ್ನು ದರೋಡೆಕೋರರು ಎಂದು ಉಲ್ಲೇಖಿಸಿದ ಆರೋಪದಲ್ಲಿ ಆರ್ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ಗುಜರಾತಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅಹ್ಮದಾಬಾದ್ ಮೂಲದ ಸ್ವಯಂ ಸೇವಾ ಸಂಘಟನೆ ಆಲ್ ಇಂಡಿಯಾ ಆ್ಯಂಟಿ ಕರಪ್ಶನ್ ಆ್ಯಂಡ್ ಕ್ರೈಮ್ ಪ್ರಿವೆಂಟಿವ್ ಕೌನ್ಸಿಲ್ (ಗುಜರಾತ್ ರಾಜ್ಯ) ನ ಅಧ್ಯಕ್ಷ ಹರೇಶ್ ಮೆಹ್ತಾ ಅವರು ತೇಜಸ್ವಿ ಯಾದವ್ ಅವರ ವಿರುದ್ಧ ದೂರು ದಾಖಲಿಸಿದ್ದರು.
ನವೆಂಬರ್ 6ರಂದು ದೂರುದಾರರಿಗೆ ನೋಟಿಸು ಜಾರಿ ಮಾಡಿದ ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಗೆ ತಡೆ ನೀಡಿತ್ತು. ಅನಂತರ ತೇಜಸ್ವಿ ಯಾದವ್ ಅವರು ತನ್ನ ಹೇಳಿಕೆ ಹಿಂಪಡೆಯುವ ಅಫಿಡಾವಿಟ್ ಸಲ್ಲಿಸಿದ್ದರು. ಆದರೆ, ಅಫಿಡಾವಿಟ್ ಗೆ ಆಕ್ಷೇಪ ವ್ಯಕ್ತಪಡಿಸಿದ ಹರೇಶ್ ಮೆಹ್ತಾ, ಅವರು ಹೇಳಿಕೆಯನ್ನು ಹಿಂಪಡೆದಿರುವುದು ಸ್ಪಷ್ಟವಾಗಿಲ್ಲ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹೊಸ ಅಫಿಡಾವಿಟ್ ಸಲ್ಲಿಸುವಂತೆ ತೇಜಸ್ವಿ ಯಾದವ್ ಅವರಿಗೆ ನಿರ್ದೇಶಿಸಿತ್ತು. ಮಂಗಳವಾರ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠ ತೇಜಸ್ವಿ ಯಾದವ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಿತು.