ಚುನಾವಣಾ ಬಾಂಡ್ : 5 ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ಅಕ್ಟೋಬರ್ 31 ರಂದು ಮುಂದಿನ ವಿಚಾರಣೆ
ಹೊಸದಿಲ್ಲಿ : ಚುನಾವಣಾ ಬಾಂಡ್ ಗಳ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಕಟಿಸಿದೆ.
‘‘ಪ್ರಕರಣದ ವಿಚಾರಣೆಯನ್ನು ಈಗಿನ ಮೂವರು ನ್ಯಾಯಾಧೀಶರ ಪೀಠದಿಂದ ಕನಿಷ್ಠ ಐವರು ನ್ಯಾಯಾಧೀಶರನ್ನು ಒಳಗೊಂಡಿರುವ ದೊಡ್ಡ ಪೀಠವೊಂದಕ್ಕೆ ವರ್ಗಾಯಿಸುವಂತೆ ಕೋರಿರುವ ಅರ್ಜಿಯೊಂದನ್ನು ನಾವು ಸ್ವೀಕರಿಸಿದ್ದೇವೆ. ವಿಷಯದ ಗಹನತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದೆ’’ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹೇಳಿದರು.
ಚುನಾವಣಾ ಬಾಂಡ್ ಗಳು ಜನರು ಮತ್ತು ಕಾರ್ಪೊರೇಟ್ ಗುಂಪುಗಳು ರಾಜಕೀಯ ಪಕ್ಷಗಳಿಗೆ ನೀಡುವ ಆರ್ಥಿಕ ದೇಣಿಗೆಯಾಗಿದೆ. ಈ ಬಾಂಡ್ ಗಳನ್ನು ನಿರ್ದಿಷ್ಟ ಬ್ಯಾಂಕ್ ನಿಂದ ಖರೀದಿಸಿ ರಾಜಕೀಯ ಪಕ್ಷಗಳಿಗೆ ನೀಡಬಹುದಾಗಿದೆ. ಬಳಿಕ ರಾಜಕೀಯ ಪಕ್ಷಗಳು ಅವುಗಳನ್ನು ಬ್ಯಾಂಕ್ ಗೆ ಸಲ್ಲಿಸಿ ಹಣ ಪಡೆಯುತ್ತವೆ. ಯಾರು ಯಾವ ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಿದ್ದಾರೆ ಎನ್ನುವ ವಿಷಯ ಜನರಿಗೆ ಮತ್ತು ಪ್ರತಿಪಕ್ಷಗಳಿಗೆ ತಿಳಿಯುವುದಿಲ್ಲ. ಆದರೆ, ಸರಕಾರ ನಡೆಸುವ ಪಕ್ಷಕ್ಕೆ ಅದು ಗೊತ್ತಾಗುತ್ತದೆ.
ಕೇಂದ್ರದಲ್ಲಿರುವ ಭಾರತೀಯ ಜನತಾ ಪಕ್ಷ ಸರಕಾರವು 2018 ಜನವರಿಯಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದಿದೆ.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸಂಸ್ಥೆಯು 2017ರ ಸೆಪ್ಟಂಬರ್ ನಲ್ಲಿ ಚುನಾವಣಾ ಬಾಂಡ್ ಗಳಿಗೆ ಅವಕಾಶ ನೀಡಬಾರದು ಎಂದು ಕೋರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿತ್ತು. ಆದರೆ, ಅದರ ವಿಚಾರಣೆ ನಡೆದಿಲ್ಲ.
ಚುನಾವಣಾ ಬಾಂಡ್ ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಂವಿಧಾನ ಪೀಠಕ್ಕೆ ವಹಿಸಬೇಕೇ ಎನ್ನುವ ವಿಷಯವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಮಾರ್ಚ್ ನಲ್ಲಿ ಹೇಳಿತ್ತು. ಕಳೆದ ವಾರ, ಸುಪ್ರೀಂ ಕೋರ್ಟ್ ಈ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅ. 31ಕ್ಕೆ ನಿಗದಿಪಡಿಸಿತ್ತು.
ಅರ್ಜಿದಾರರು ತಮ್ಮ ಅರ್ಜಿಗಳಲ್ಲಿ ಎರಡು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳೆಂದರೆ, ರಾಜಕೀಯ ಪಕ್ಷಗಳಿಗೆ ನೀಡುವ ಅನಾಮಧೇಯ ದೇಣಿಗೆಗಳ ಕ್ರಮಬದ್ಧತೆ ಮತ್ತು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿರುವುದು. ಚುನಾವಣಾ ಬಾಂಡ್ ಗಳ ಈ ಅಂಶಗಳು ಭ್ರಷ್ಟಾಚಾರವನ್ನು ಬೆಳೆಸುತ್ತವೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ, 2017ರ ತನ್ನ ಬಜೆಟ್ ಭಾಷಣದಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಘೋಷಿಸಿದ್ದರು. ರಾಜಕೀಯ ಪಕ್ಷಗಳಿಗೆ ನಿಧಿ ಒದಗಿಸುವುದನ್ನು ಸ್ವಚ್ಛಗೊಳಿಸಲು ಮತ್ತು ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸಲು ಸರಕಾರ ಬಯಸಿದೆ ಎಂದು ಹೇಳಿಕೊಂಡಿದ್ದರು.
ಆದರೆ, ಈ ಇಡೀ ಪ್ರಕ್ರಿಯೆ ಅನಾಮಧೇಯತನದಿಂದ ಕೂಡಿದೆ. ಈ ಬಾಂಡ್ ಗಳನ್ನು ತಾವು ಖರೀದಿಸಿದ್ದೇವೆ ಎಂದು ಯಾರೂ ಘೋಷಿಸಬೇಕಾಗಿಲ್ಲ ಮತ್ತು ತಮ್ಮ ದೇಣಿಗೆ ಹಣದ ಮೂಲವನ್ನು ತೋರಿಸಬೇಕಾಗಿಲ್ಲ.
ಬಿಜೆಪಿಯ ಘೋಷಿತ ಸಂಪತ್ತು ಕಾಂಗ್ರೆಸ್ ಗಿಂತ ಏಳೂವರೆ ಪಟ್ಟು ಹೆಚ್ಚು
2021-22ರಲ್ಲಿ ಬಿಜೆಪಿಯ ಘೋಷಿತ ಸಂಪತ್ತು ಕಾಂಗ್ರೆಸ್ ಗಿಂತ ಏಳೂವರೆ ಪಟ್ಟು ಹೆಚ್ಚಾಗಿತ್ತು ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಕಳೆದ ತಿಂಗಳು ಬಿಡುಗಡೆಗೊಳಿಸಿದ ವರದಿಯೊಂದರಲ್ಲಿ ಹೇಳಿದೆ. ಕಳೆದ ವರ್ಷ ಬಿಜೆಪಿಯ ಘೋಷಿತ ಸಂಪತ್ತು 6,046.81 ಕೋಟಿ ರೂ. ಆಗಿತ್ತು ಹಾಗೂ ಅದು 2020-21ರಲ್ಲಿದ್ದ ಅದರ ಘೋಷಿತ ಸಂಪತ್ತು 4,990 ಕೋಟಿ ರೂ.ಗಿಂತ 21.17% ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಕಾಂಗ್ರೆಸ್ ನ ಘೋಷಿತ ಸಂಪತ್ತು 805.68 ಕೋಟಿ ರೂ. ಆಗಿತ್ತು. ಅದು 2020-21ರ ಅದರ ಘೋಷಿತ ಸಂಪತ್ತು 691.11 ಕೋಟಿ ರೂ.ಗಿಂತ 16.58% ಹೆಚ್ಚಾಗಿದೆ.