ಗೋವಾ ಶಾಸಕರ ಅನರ್ಹತೆ ಅರ್ಜಿ ತಿರಸ್ಕಾರ | ಗೋವಾ ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ಸುಪ್ರೀಂಕೋರ್ಟ್ ( PC : PTI )
ಹೊಸದಿಲ್ಲಿ : ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಗೋವಾದ ತನ್ನ ಎಂಟು ಶಾಸಕರನ್ನು ಅನರ್ಹಗೊಳಿಸಬೇಕು ಎಂದು ತಾನು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಗೋವಾ ವಿಧಾನಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಶುಕ್ರವಾರ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಗೋವಾ ವಿಧಾನಸಭಾ ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ, ಬಾಂಬೆ ಹೈಕೋರ್ಟ್ನ ಗೋವಾ ಪೀಠಕ್ಕೆ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ನಾಯಕ ಗಿರೀಶ್ ಚೊಡಾಂಕರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾ. ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿತು.
ಬಿಜೆಪಿಗೆ ಪಕ್ಷಾಂತರ ಮಾಡಿದ್ದ ತನ್ನ ಎಂಟು ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ನವೆಂಬರ್ 1ರಂದು ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತವಾಡ್ಕರ್ ವಜಾಗೊಳಿಸಿದ್ದರು.
ಕಾಂಗ್ರೆಸ್ ಶಾಸಕರಾದ ದಿಗಂಬರ್ ಕಾಮತ್, ಅಲೈಕ್ಸೊ ಸಿಕ್ವೇರಾ, ಸಂಕಲ್ಪ್ ಅಮೋಂಕರ್, ಮೈಕೇಲ್ ಲೋಬೊ, ದೆಲಿಲಾ ಲೋಬೊ, ಕೇದಾರ್ ನಾಯಕ್, ರುಡಾಲ್ಫೊ ಫರ್ನಾಂಡೀಸ್ ಹಾಗೂ ರಾಜೇಶ್ ಫಲ್ದೇಸಾಯಿ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸುವಂತೆ ಗೋವಾ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೊಡಾಂಕರ್ ಅರ್ಜಿ ಸಲ್ಲಿಸಿದ್ದರು.