ಚುನಾವಣಾ ಆಯುಕ್ತರ ನೇಮಕಾತಿಯ ನೂತನ ಕಾನೂನಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಸೇವಾ ಶರತ್ತುಗಳಿಗೆ ಸಂಬಂಧಿಸಿದ ನೂತನ ಕಾನೂನಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಶರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023ನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರತಿವಾದಿಗಳಿಗೆ ಅರ್ಜಿಯ ಪ್ರತಿಗಳನ್ನು ನೀಡಲಾಗಿಲ್ಲ ಎನ್ನುವುದನ್ನು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಒಪ್ಪಿಕೊಂಡ ಬಳಿಕ, ಕಾನೂನಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
ಬಳಿಕ, ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಗಳನ್ನು ಜಾರಿಗೊಳಿಸಿತು.
ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರ ನೇಮಕಾತಿಗೆ ಪ್ರಧಾನಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯೊಂದನ್ನು ನೇಮಿಸುವುದಕ್ಕೆ ಸಂಬಂಧಿಸಿದ ಕಾನೂನು ಇದಾಗಿದೆ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮತ್ತು ಪ್ರಧಾನಿಯಿಂದ ನೇಮಕಗೊಳ್ಳುವ ಸಂಪುಟ ದರ್ಜೆಯ ಕೇಂದ್ರ ಸಚಿವರೊಬ್ಬರು ಈ ಸಮಿತಿಯ ಇತರ ಸದಸ್ಯರಾಗಿರುತ್ತಾರೆ.
ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯಕ್ತರ ನೇಮಕಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕಳೆದ ವರ್ಷದ ಮಾರ್ಚ್ ನಲ್ಲಿ ಮಹತ್ವದ ಆದೇಶವೊಂದನ್ನು ನೀಡಿತ್ತು. ಈ ನೇಮಕಾತಿಗಾಗಿ ಪ್ರಧಾನಿ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಮೂವರು ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಬೇಕು ಎಂದು ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಈ ವಿಷಯದಲ್ಲಿ ಸಂಸತ್ ಕಾನೂನೊಂದನ್ನು ರೂಪಿಸುವವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಬೇಕು ಎಂದು ನ್ಯಾಯಾಲಯ ಹೇಳಿತ್ತು.
ಸರಕಾರದ ಹಸ್ತಕ್ಷೇಪದಿಂದ ಚುನಾವಣಾ ಆಯೋಗವನ್ನು ರಕ್ಷಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ಮಾದರಿಯ ಸಮಿತಿಯೊಂದನ್ನು ರೂಪಿಸಿತ್ತು.
ಸರಕಾರ ರೂಪಿಸಿರುವ ನೂತನ ಕಾನೂನು ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ತನ್ನ ಅರ್ಜಿಯಲ್ಲಿ ಜಯಾ ಠಾಕೂರ್ ಆರೋಪಿಸಿದ್ದಾರೆ. ಯಾಕೆಂದರೆ, ಈ ಕಾನೂನು ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗಳಿಗೆ ಸ್ವತಂತ್ರ ವ್ಯವಸ್ಥೆಯೊಂದನ್ನು ಒದಗಿಸುವುದಿಲ್ಲ ಎಂದು ಅವರು ವಾದಿಸಿದ್ದಾರೆ.
ಈ ಕಾನೂನಿನಡಿ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆ ಹಿಗಿದೆ: ಕೇಂದ್ರ ಸರಕಾರದ ಮೂವರು ಅಧಿಕಾರಿಗಳನ್ನು ಒಳಗೊಂಡ ಶೋಧ ಸಮಿತಿಯು ಚುನಾವಣಾ ಆಯುಕ್ತರ ಹುದ್ದೆಗಳಿಗೆ ಐವರು ವ್ಯಕ್ತಿಗಳ ಪಟ್ಟಿಯೊಂದನ್ನು ತಯಾರಿಸುತ್ತದೆ. ಬಳಿಕ ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯು ಈ ಪಟ್ಟಿಯನ್ನು ಪರಿಶೀಲಿಸಿ ಆಯುಕ್ತರನ್ನು ನೇಮಿಸುತ್ತದೆ.
ಈ ಕಾನೂನು ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ಪ್ರಕ್ರಿಯೆಯಿಂದ ಭಾರತದ ಮುಖ್ಯ ನ್ಯಾಯಾಧೀಶರನ್ನು ಹೊರಗಿಡುತ್ತದೆ ಮತ್ತು ಪ್ರಧಾನಿ ಮತ್ತು ಅವರು ನೇಮಿಸುವ ಸಚಿವರನ್ನು ನೇಮಕಾತಿಗಳಲ್ಲಿ ನಿರ್ಣಾಯಕರನ್ನಾಗಿಸುತ್ತದೆ. ಹಾಗಾಗಿ, ಅದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯೂ ಆಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಧಿಕಾರವನ್ನು ಪ್ರತ್ಯೇಕಿಸುವ ತತ್ವಕ್ಕೆ ಈ ಕಾನೂನು ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲರು ಶುಕ್ರವಾರ ವಾದಿಸಿದರು.