32 ವಾರಗಳ ಗರ್ಭ ಕೊನೆಗೊಳಿಸುವ ವಿಧವೆಯ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ತನ್ನ 32 ವಾರಗಳ ಗರ್ಭವನ್ನು ಕೊನೆಗೊಳಿಸಲು ಅನುಮತಿ ನೀಡಬೇಕು ಎಂದು ಕೋರಿ ವಿಧವೆಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಭ್ರೂಣವು ಆರೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಇನ್ನೂ ಹುಟ್ಟಬೇಕಾಗಿರುವ ಶಿಶು ಮತ್ತು ತಾಯಿ ಇಬ್ಬರ ಹಿತಾಸಕ್ತಿಗಳನ್ನು ರಕ್ಷಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ ಎಂದು ಹೇಳಿತು.
ಈ ಗರ್ಭದಿಂದ ತಾನು ಮಾನಸಿಕ ಕ್ಷೇಶ ಮತ್ತು ಖಿನ್ನತೆಗೆ ಒಳಗಾಗಿದ್ದೇನೆ ಎಂದು 26 ವರ್ಷದ ಮಹಿಳೆ ನ್ಯಾಯಾಲಯದಲ್ಲಿ ಹೇಳಿದರು. ಆದರೆ ಅವರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಮಹಿಳೆಯ ಯೋಗಕ್ಷೇಮವನ್ನು ಸರಕಾರ ನೋಡಿಕೊಳ್ಳಬೇಕು ಎಂದು ಆದೇಶ ನೀಡಿತು.
ಇದಕ್ಕೂ ಮೊದಲು ದಿಲ್ಲಿ ಹೈಕೋರ್ಟ್ ಗರ್ಭಪಾತಕ್ಕೆ ಅನುಮೋದನೆ ನೀಡಿತ್ತು. ಆದರೆ, ಮಗು ಸಂಭಾವ್ಯ ದೈಹಿಕ ಮತ್ತು ಮಾನಸಿಕ ನ್ಯೂನತೆಗಳೊಂದಿಗೆ ಜೀವಂತವಾಗಿ ಜನಿಸುತ್ತದೆ ಎಂಬುದಾಗಿ ವೈದ್ಯಕೀಯ ವರದಿ ಹೇಳಿದ ಬಳಿಕ ಅದು ತನ್ನ ಆದೇಶವನ್ನು ವಾಪಸ್ ಪಡೆದುಕೊಂಡಿತ್ತು.
‘‘ಭ್ರೂಣದಲ್ಲಿ ಯಾವುದೇ ಅಸಹಜತೆಯಿಲ್ಲ. ಅದು ಸಂಪೂರ್ಣ ಹಾಗೂ ಸಾಮಾನ್ಯ ದೇಹದ ಮಗುವಾಗಿದೆ. ಈ ಅರ್ಜಿಯನ್ನು ನಾವು ಬೆಂಬಲಿಸುವುದಿಲ್ಲ’’ ಎಂದು ನ್ಯಾ. ಬೇಲಾ ಎಮ್. ತ್ರಿವೇದಿ ನೇತೃತ್ವದ ಹಾಗೂ ನ್ಯಾ. ಪ್ರಸನ್ನ ಬಿ.ವರಾಳೆ ಸದಸ್ಯರಾಗಿರುವ ಸುಪ್ರೀಂ ಕೋರ್ಟ್ ಪೀಠವೊಂದು ಬುಧವಾರ ಹೇಳಿತು.