ಅರವಿಂದ್ ಕೇಜ್ರಿವಾಲ್ ಗೆ ಹಿನ್ನಡೆ | ಆರೋಗ್ಯದ ಆಧಾರದಲ್ಲಿ ಜಾಮೀನು ವಿಸ್ತರಣೆಗೆ ಕೋರಿದ್ದ ಮನವಿಯನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್
Photo : PTI
ಹೊಸ ದಿಲ್ಲಿ: ಆರೋಗ್ಯದ ಆಧಾರದಲ್ಲಿ ತಮ್ಮ ಮಧ್ಯಂತರ ಜಾಮೀನು ಅವಧಿಯನ್ನು ಒಂದು ವಾರ ಕಾಲ ವಿಸ್ತರಿಸಲು ತುರ್ತು ವಿಚಾರಣೆ ನಡೆಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಬಂಧಿತರಾಗಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ದಿಲ್ಲಿಯ ಏಳು ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಕೈಗೊಳ್ಳಲು ಜೂನ್ 1ರವರೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜೂನ್ 2ರಂದು ಅವರು ಮತ್ತೆ ತಿಹಾರ್ ಜೈಲಿಗೆ ಮರಳಬೇಕಿದೆ.
ಈ ಕುರಿತು ರಜಾಕಾಲದ ಪೀಠದ ಮುಂದೆ ಸಲ್ಲಿಕೆಯಾಗಿದ್ದ ಅರವಿಂದ್ ಕೇಜ್ರಿವಾಲ್ ರ ಅರ್ಜಿಯನ್ನು ಮನ್ನಿಸಲು ನಿರಾಕರಿಸಿದ ನ್ಯಾಯಪೀಠವು, ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಕಳಿಸಿ ಕೊಡಲಾಗುವುದು ಹಾಗೂ ಅವರ ನಿರ್ಧಾರದ ನಂತರ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.
ಈ ಹಿಂದಿನ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಅರವಿಂದ್ ಕೇಜ್ರಿವಾಲ್ ಜೂನ್ 2ರಂದು ತಿಹಾರ್ ಜೈಲಿಗೆ ಮರಳಬೇಕಿದೆ ಇಲ್ಲವೆ ಸುಪ್ರೀಂ ಕೋರ್ಟ್ ನ ತರಾಟೆಯನ್ನು ಎದುರಿಸಬೇಕಿದೆ.