ಬಲವಂತ ವಿವಾಹ | ಪತ್ನಿಗೆ ಜೀವನಾಂಶ ನೀಡಬೇಕು ಎಂಬ ಜಾಮೀನು ಶರತ್ತನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
Photo : PTI
ಹೊಸದಿಲ್ಲಿ: ಬಿಹಾರದ ಬಲವಂತ ವಿವಾಹ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿಗೆ 4,000 ರೂ. ಜೀವನಾಂಶ ನೀಡಬೇಕು ಎಂದು ಅರ್ಜಿದಾರರಿಗೆ ಪಾಟ್ನಾ ಹೈಕೋರ್ಟ್ ವಿಧಿಸಿದ್ದ ಜಾಮೀನು ಶರತ್ತನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 438ರ ಅನ್ವಯ ನ್ಯಾಯಾಲಯವು ಇಂತಹ ಶರತ್ತನ್ನು ವಿಧಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
“ಅರ್ಜಿದಾರರು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ, ಅರ್ಜಿದಾರರು ನ್ಯಾಯದಿಂದ ಪರಾರಿಯಾಗದಂತೆ ಹಾಗೂ ವಿಚಾರಣೆಯ ಸಂದರ್ಭದಲ್ಲಿ ಲಭ್ಯವಿರುವಂತಹ ಶರತ್ತುಗಳನ್ನು ನ್ಯಾಯಾಲಯ ವಿಧಿಸಬೇಕಾಗುತ್ತದೆ. ಆದರೆ, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 438ರ ಅಡಿ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲದಂತಹ ಅಸಮರ್ಪಕ ಶರತ್ತನ್ನು ವಿಧಿಸುವ ಅಗತ್ಯವಿಲ್ಲ” ಎಂದು ನ್ಯಾ. ಹೃಷಿಕೇಶ್ ರಾಯ್ ಹಾಗೂ ನ್ಯಾ. ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
ರಾಜ್ಯದ ಪರ ವಾದಿಸಿದ ವಕೀಲರು, ಅರ್ಜಿದಾರರ ಪರ ವಕೀಲರು ಜೀವನಾಂಶ ನೀಡುವುದಾಗಿ ಒಪ್ಪಿಕೊಂಡ ಕಾರಣಕ್ಕಾಗಿಯೇ ಜಾಮೀನು ಶರತ್ತಿನಲ್ಲಿ ಜೀವನಾಂಶದ ಅಂಶವನ್ನು ಸೇರ್ಪಡೆ ಮಾಡಲಾಗಿದ್ದು, ಇದನ್ನು ನಿರ್ದಿಷ್ಟವಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ, ರಾಜ್ಯದ ಪರ ವಕೀಲರ ವಾದವನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ 4,000 ರೂ. ಜೀವನಾಂಶ ನೀಡಬೇಕು ಎಂದು ಪಾಟ್ನಾ ಹೈಕೋರ್ಟ್ ನೀಡಿರುವ ಆದೇಶಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿ, ಜೀವನಾಂಶದ ಶರತ್ತನ್ನು ವಜಾಗೊಳಿಸಿತು.