ಮಸೂದೆಗಳಿಗೆ ಅಂಕಿತ ನೀಡದ ಕೇರಳ ರಾಜ್ಯಪಾಲರಿಗೆ ಸುಪ್ರೀಂ ತರಾಟೆ
ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್(PTI)
ಹೊಸದಿಲ್ಲಿ: ಕೇರಳ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.
ಎಂಟು ಮಸೂದೆಗಳಿಗೆ ಅಂಕಿತ ನೀಡಲು ಎರಡು ವರ್ಷಗಳ ಕಾಲ ವಿಳಂಬಿಸಲು ಯಾವುದೇ ಕಾರಣವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.
ರಾಜ್ಯಪಾಲರ ಅಧಿಕಾರವನ್ನು ರಾಜ್ಯ ವಿಧಾನಸಭೆಯ ಕಾನೂನು ರಚನೆ ಪ್ರಕ್ರಿಯೆಯ ಶಾಸಕಾಂಗ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಬಳಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತಲ್ಲದೆ ರಾಜ್ಯಪಾಲರೊಬ್ಬರು ಯಾವಾಗ ರಾಷ್ಟ್ರಪತಿಗಳಿಗೆ ಮಸೂದೆಗಳನ್ನು ಕಳುಹಿಸಬಹುದೆಂಬ ಕುರಿತು ಮಾರ್ಗಸೂಚಿಗಳನ್ನು ನಿಗದಿಪಡಿಸುವ ಕುರಿತು ತಾನು ಪರಿಶೀಲಿಸುವುದಾಗಿ ತಿಳಿಸಿತು.
ಮಸೂದೆ ಅಂಗೀಕರಿಸಲು ರಾಜ್ಯಪಾಲರ ವಿಳಂಬ ಧೋರಣೆಯನ್ನು ದೂರಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ ನಂತರ ರಾಜ್ಯಪಾಲರು ಒಂದು ಮಸೂದೆಗೆ ಅಂಕಿತ ನೀಡಿ ಉಳಿದ ಏಳು ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ ಎಂದು ಕೇರಳ ಸರ್ಕಾರದ ಪರ ವಾದಿಸಿದ ಮಾಜಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಹೇಳಿದರಲ್ಲದೆ ಸುಪ್ರೀಂ ಕೋರ್ಟಿನಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ವಿಚಾರಣೆ ನಡೆಯುವ ಮುನ್ನಾ ದಿನ, ಅಂದರೆ ಮಂಗಳವಾರದಂದು ರಾಜ್ಯಪಾಲರು ಒಂದು ಮಸೂದೆಗೆ ಅಂಕಿತ ನೀಡಿ ಉಳಿದವನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ್ದರು.