ಶೀಘ್ರದಲ್ಲೇ NJDG ವ್ಯಾಪ್ತಿಗೆ ಸುಪ್ರೀಂಕೋರ್ಟ್; ಪ್ರಕರಣಗಳ ಮಾಹಿತಿ ಡಿಜಿಟಲ್ ವೇದಿಕೆಯಲ್ಲಿ ಲಭ್ಯ
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ಶೀಘ್ರದಲ್ಲೇ ಸುಪ್ರೀಂಕೋರ್ಟ್ ನ್ಯಾಷನಲ್ ಜ್ಯುಡಿಸಿಯಲ್ ಡಾಟಾ ಗ್ರಿಡ್ (NJDG) ವೇದಿಕೆಯೊಂದಿಗೆ ಸಂಪರ್ಕಿಸಲ್ಪಡಲಿದೆ. ತಾಲೂಕಿನಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ದೀರ್ಘಸಮಯದಿಂದ ವಿಚಾರಣೆಗೆ ಬಾಕಿಯುಳಿದಿರುವ ಹಾಗೂ ವಿಚಾರಣೆಯ ವಿವಿಧ ಹಂತಗಳಲ್ಲಿರುವ ಪ್ರಕರಣಗಳ ಕುರಿತಾದ ದತ್ತಾಂಶಗಳ ಡಿಜಿಟಲ್ ಸಂಗ್ರಹಾಗಾರವಾಗಿ NJDG ಕಾರ್ಯಾಚರಿಸುತ್ತದೆ.
ಈ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ವೈ.ಚಂದ್ರಚೂಡ ಹೇಳಿಕೆಯೊಂದನ್ನು ನೀಡಿದ್ದು, ‘‘ ಇದೊಂದು ಐತಿಹಾಸಿಕ ದಿನವಾಗಿದೆ. ಎನ್ಐಸಿ ಅಭಿವೃದ್ಧಿಪಡಿಸಿರುವ ವಿಶಿಷ್ಟ ಹಾಗೂ ಮಾಹಿತಿಯುತವಾದ ವೇದಿಕೆಯನ್ನು ಎನ್ಐಸಿ ಹಾಗೂ ಸುಪ್ರೀಂಕೋರ್ಟ್ ನ ಆಂತರಿಕ ತಂಡ ಅಭಿವೃದ್ಧಿಪಡಿಸಿದೆ. ಕೇವಲ ಒಂದು ಬಟನ್ ಕ್ಲಿಕ್ಕಿಸುವುದರಿಂದ ನೀವು ಬಾಕಿಯುಳಿದಿರುವ ಹಾಗೂ ವಿಲೇವಾರಿಯಾದ ಪ್ರಕರಣಗಳ ವರ್ಷವಾರು ಮಾಹಿತಿ, ನೋಂದಣಿಯಾಗಿರುವ ಮತ್ತು ನೋಂದಣಿಯಾಗದೆ ಇರುವ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ’’ ಎಂದು ತಿಳಿಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಸ್ಥಾಪಿಸುವುದೇ ಎನ್ಯುಡಿಜಿಯ ಉದ್ದೇಶವಾಗಿದೆ ಎಂದು ಸಿಜೆಐ ಪ್ರತಿಪಾದಿಸಿದರು. ಈವರೆಗೆ, NJDG ವೇದಿಕೆಯು ಹೈಕೋರ್ಟ್ ಮಟ್ಟದವರೆಗಿನ ಪ್ರಕರಣಗಳ ದತ್ತಾಂಶವನ್ನು ಮಾತ್ರವೇ ಸಂಗ್ರಹಿಸುತ್ತಿತ್ತು . ಇದೀಗ ಸರ್ವೋಚ್ಚ ನ್ಯಾಯಾಲಯ ಕೂಡಾ ಈ ವೇದಿಕೆಯಲ್ಲಿ ಪ್ರಕರಣಗಳನ್ನು ಅಪ್ಲೋಡ್ ಮಾಡಲಿದೆ ಎಂದವರು ಹೇಳಿದ್ದಾರೆ.
ಏನಿದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್?
► ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (NJDG) ಆನ್ಲೈನ್ ಡಾಟಾಬೇಸ್ ಆಗಿದ್ದು, 2020ರ ಇ-ಕೋರ್ಟ್ ಯೋಜನೆಯ ಭಾಗವಾಗಿ ಅದನ್ನು ಸ್ಥಾಪಿಸಲಾಗಿತ್ತು. ಕಾನೂನು ಹಾಗೂ ನ್ಯಾಯಾಂಗ ಸಚಿವಾಲಯದ ದತ್ತಾಂಶದ ಪ್ರಕಾರ ಈ ಡಿಜಿಟಲ್ ವೇದಿಕೆಯು ದೇಶದ 18,735 ಜಿಲ್ಲಾ ಹಾಗೂ ಆಧೀನ ನ್ಯಾಯಾಲಯಗಳು ಮತ್ತು ಹೈಕೋರ್ಟ್ನ ಆದೇಶದ ದಾಖಲೆಗಳು, ತೀರ್ಪು ಹಾಗೂ ಪ್ರಕರಣದ ವಿವರಗಳನ್ನು ಒಳಗೊಂಡಿರುತ್ತದೆ.
► ಜಿಲ್ಲಾ ಹಾಗೂ ತಾಲೂಕು ಮಟ್ಟದ ನ್ಯಾಯಾಲಗಳ ಜೊತೆ ಡಿಜಿಟಲ್ ಸಂಪರ್ಕ ಹೊಂದುವ ಮೂಲಕ ಎನ್ಯುಡಿಜಿ ದತ್ತಾಂಶಗಳನ್ನು ಅಪ್ಡೇಟ್ ಮಾಡುತ್ತದೆ.
► ದೇಶಾದ್ಯಂತ ಕಂಪ್ಯೂಟರೀಕೃತ ಜಿಲ್ಲಾ ಹಾಗೂ ಆಧೀನ ನ್ಯಾಯಾಲಯಗಳ ಕಾನೂನು ಕಲಾಪಗಳು ಹಾಗೂ ತೀರ್ಪುಗಳ ಕುರಿತ ಸಮಗ್ರ ಮಾಹಿತಿಯ ಆಗರವಾಗಿ NJDG ಕಾರ್ಯನಿರ್ವಹಿಸುತ್ತದೆ. ವೆಬ್ಸರ್ವಿಸ್ ಮೂಲಕ ಹೈಕೋರ್ಟ್ಗಳು ಎನ್ಯುಡಿಜಿ ಜೊತೆ ಸಂಪರ್ಕನ್ನ್ನು ಹೊಂದಿದ್ದು, ಇದರಿಂದ ನ್ಯಾಯಾಲಯದ ಕಲಾಪಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಪಡೆಯಲು ಸಾರ್ವಜನಿಕರಿಗೆ ಸುಲಭವಾಗಲಿದೆ.
► NJDG ಫ್ಲಾಟ್ ಫಾರಂ ಮೂಲಕ 23.81 ಕೋಟಿ ಪ್ರಕರಣಗಳ ಮತ್ತು 23.02 ಕೋಟಿ ಆದೇಶಗಳು ಹಾಗೂ ತೀರ್ಪುಗಳ ಕುರಿತಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ.
► ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳ ದತ್ತಾಂಶಗಳನ್ನು NJDG ಒದಗಿಸಲಿದೆ.
► ವಿಚಾರಣೆಗೆ ನೆನೆಗುದಿಯಲ್ಲಿರುವ ಪ್ರಕರಣಗಳ ವಿಲೇವಾರಿಗೆ ನೆರವು, ವಿಚಾರಣೆಗೆ ಬಾಕಿಯುಳಿದಿರುವ ಪ್ರಕರಣಗಳನ್ನು ಗುರುತಿಸುವಿಕೆ, ನಿರ್ವಹಣೆ ಹಾಗೂ ಪ್ರಕರಣಗಳ ಬ್ಯಾಕ್ಲಾಗ್ ಕಡಿಮೆಗೊಳಿಸುವಂತಹ ಪ್ರಾಥಮಿಕ ಕಾರ್ಯಗಳ ಕಣ್ಗಾವಲು ಘಟಕವಾಗಿ ಎನ್ಯುಡಿಜಿ ಕಾರ್ಯನಿರ್ವಹಿಸುತ್ತದೆ. ಪ್ರಕರಣಗಳ ತೀರ್ಪು, ಆದೇಶಗಳನ್ನು ತ್ವರಿತಗೊಳಿಸುವುದು. ಆ ಮೂಲಕ ನೆನೆಗುದಿಯಲ್ಲಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಉದ್ದೇಶವನ್ನು NJDG ಹೊಂದಿದೆ.