ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರಾಧಿಕಾರವನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್
ಆಪ್ ಗೆ ಭಾರೀ ಹಿನ್ನಡೆ
ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (Photo:tribuneindia)
ಹೊಸದಿಲ್ಲಿ: ಸರಕಾರದ ಸಮ್ಮತವಿಲ್ಲದೆಯೂ ದಿಲ್ಲಿ ಮಹಾನಗರ ಪಾಲಿಕೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಗೆ ಇದೆ ಎಂದು ಸೋಮವಾರ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಇದರಿಂದ ದಿಲ್ಲಿಯ ಆಡಳಿತಾರೂಢ ಪಕ್ಷವಾದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
ಈ ಅಧಿಕಾರವು ದಿಲ್ಲಿ ಮಹಾನಗರ ಪಾಲಿಕೆ ಕಾಯ್ದೆಯಿಂದ ಬಂದಿದ್ದು, ಹೀಗಾಗಿ ದಿಲ್ಲಿ ಸರಕಾರದ ಸಲಹೆಯನ್ನು ಪಾಲಿಸಬೇಕಾದ ಅಗತ್ಯ ಲೆಫ್ಟಿನೆಂಟ್ ಗವರ್ನರ್ ಅವರಿಗಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದು ಶಾಸನಾತ್ಮಕ ಅಧಿಕಾರವಾಗಿದ್ದು, ಕಾರ್ಯಕಾರಿ ಅಧಿಕಾರವಲ್ಲದೆ ಇರುವುದರಿಂದ ಲೆಫ್ಟಿನೆಂಟ್ ಗವರ್ನರ್ ಶಾಸನಾತ್ಮಕ ಅಧಿಕಾರವನ್ನು ಪಾಲಿಸಬೇಕೇ ಹೊರತು ದಿಲ್ಲಿ ಸರಕಾರದ ಸಲಹೆಯನ್ನಲ್ಲ ಎಂದೂ ಅದು ಹೇಳಿದೆ.
ದಿಲ್ಲಿ ಮಹಾನಗರ ಪಾಲಿಕೆಗೆ 10 ಮಂದಿ ಹಿರಿಯ ಅಧಿಕಾರಿಗಳನ್ನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ನೇಮಿಸಿದ್ದು ತೀವ್ರ ವಿವಾದ ಸೃಷ್ಟಿಸಿತ್ತು. ಮಹಾನಗರ ಪಾಲಿಕೆಗೆ ಸಚಿವ ಸಂಪುಟದ ಸಲಹೆಯಿಲ್ಲದೆ 10 ಹಿರಿಯ ಅಧಿಕಾರಿಗಳನ್ನು ನೇಮಿಸಿದ್ದ ಲೆಫ್ಟಿನೆಂಟ್ ಗವರ್ನರ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ನ್ಯಾ. ಪಿ.ಎಸ್.ನರಸಿಂಹ ಹಾಗೂ ನ್ಯಾ.ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ಮೇ. 17, 2023ರಲ್ಲಿ ಕಾಯ್ದಿರಿಸಿತ್ತು.
ಚುನಾಯಿತ ಸರಕಾರವನ್ನು ಅತಿಕ್ರಮಿಸಿ, ಸಚಿವ ಸಂಪುಟದ ಸಲಹೆಯಿಲ್ಲದೆ ಲೆಫ್ಟಿನೆಂಟ್ ಗವರ್ನರ್ ಸ್ವಯಂಪ್ರೇರಿತವಾಗಿ ದಿಲ್ಲಿ ಮಹಾನಗರ ಪಾಲಿಕೆಗೆ ಅಧಿಕಾರಿಗಳನ್ನು ನೇಮಿಸಲು ಸಾಧ್ಯವಿಲ್ಲ ಎಂದು ದಿಲ್ಲಿಯ ಆಡಳಿತಾರೂಢ ಪಕ್ಷವಾದ ಆಪ್ ಈ ಅರ್ಜಿಯಲ್ಲಿ ವಾದಿಸಿತ್ತು.