ವೈವಾಹಿಕ ವಿವಾದಗಳಲ್ಲಿ ಕೌಟುಂಬಿಕ ಕ್ರೌರ್ಯ ಕಾನೂನುಗಳ ದುರ್ಬಳಕೆ ವಿರುದ್ಧ ಸುಪ್ರೀಂ ಕೋರ್ಟ್ ಎಚ್ಚರಿಕೆ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ ಆತ್ಮಹತ್ಯೆ ಕುರಿತು ಭುಗಿಲೆದ್ದಿರುವ ಆಕ್ರೋಶದ ನಡುವೆಯೇ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ,ಪತಿ ಅಥವಾ ಆತನ ಸಂಬಂಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ವೈವಾಹಿಕ ವಿವಾದಗಳಲ್ಲಿ ಕೌಟುಂಬಿಕ ಕ್ರೌರ್ಯ ಕಾನೂನುಗಳ ದುರ್ಬಳಕೆ ವಿರುದ್ಧ ಅದು ಎಚ್ಚರಿಕೆ ನೀಡಿದೆ.
ಪತಿ ಹಾಗೂ ಆತನ ಸಂಬಂಧಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ್ದ ತೆಲಂಗಾಣ ಉಚ್ಚ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ ಅವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಮುನ್ನ ಅವರು ತನ್ನ ನೋವನ್ನು ವಿವರಿಸಿ 24 ಪುಟಗಳ ಪತ್ರವೊಂದನ್ನು ಬರೆದಿಟ್ಟಿದ್ದು, 80 ನಿಮಿಷಗಳ ವೀಡಿಯೊವನ್ನೂ ಮಾಡಿದ್ದರು.
ವೈವಾಹಿಕ ಭಿನ್ನಾಭಿಪ್ರಾಯಗಳಿಂದಾಗಿ ಹುಟ್ಟಿಕೊಳ್ಳುವ ಕ್ರಿಮಿನಲ್ ಪ್ರಕರಣದಲ್ಲಿ ಯಾವುದೇ ದೃಢವಾದ ಸಾಕ್ಷ್ಯಾಧಾರಗಳಿಲ್ಲದೆ ಕುಟುಂಬ ಸದಸ್ಯರನ್ನು ಉಲ್ಲೇಖಿಸುವುದನ್ನು ಮೊಗ್ಗಿನಲ್ಲೇ ಚಿವುಟಿ ಹಾಕಬೇಕು ಎಂದು ಹೇಳಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು,ವೈವಾಹಿಕ ವಿವಾದಗಳು ಉದ್ಭವಿಸಿದಾಗ ಜನರು ಸಾಮಾನ್ಯವಾಗಿ ಪತಿಯ ಕುಟುಂಬದ ಎಲ್ಲ ಸದಸ್ಯರ ಮೇಲೆ ಆರೋಪಗಳನ್ನು ಹೊರಿಸುತ್ತಾರೆ ಎಂದು ಬೆಟ್ಟು ಮಾಡಿತು.
ಅಮಾಯಕ ಕುಟುಂಬ ಸದಸ್ಯರಿಗೆ ಅನಗತ್ಯ ಕಿರುಕುಳವನ್ನು ತಪ್ಪಿಸಲು ಜಾಗರೂಕವಾಗಿರುವಂತೆ ಮತ್ತು ಕಾನೂನುಗಳ ದುರ್ಬಳಕೆಯನ್ನು ತಡೆಯುವಂತೆ ಸುಪ್ರೀಂ ಕೋರ್ಟ್ ನ್ಯಾಯಾಲಯಗಳಿಗೆ ಸೂಚಿಸಿತು.
ಆದರೆ,ಕೌಟುಂಬಿಕ ಕ್ರೌರ್ಯಕ್ಕೆ ಒಳಗಾದ ಮಹಿಳೆಯರು ಮೌನವಾಗಿರಬೇಕು ಎಂದು ಇದರ ಅರ್ಥವಲ್ಲ ಎಂದು ಒತ್ತಿ ಹೇಳಿದ ಸರ್ವೋಚ್ಚ ನ್ಯಾಯಾಲಯವು, ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳು ತೆಲಂಗಾಣ ಪ್ರಕರಣದಲ್ಲಿ ದುರ್ಬಳಕೆಯಾಗಿವೆ ಎಂದು ಬೆಟ್ಟು ಮಾಡಿತು.
ಅತುಲ್ ಸುಭಾಷ ಯಾರು?
ಉತ್ತರ ಪ್ರದೇಶ ಮೂಲದ ಅತುಲ ಸುಭಾಷ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಹಿರಿಯ ಅಧಿಕಾರಿಯಾಗಿದ್ದು,ಮಾರತ್ತಹಳ್ಳಿಯ ಮಂಜುನಾಥ ಲೇಔಟ್ನ ಅಪಾರ್ಟ್ಮೆಂಟ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಪತ್ನಿಯಿಂದ ಬೇರ್ಪಟ್ಟ ಬಳಿಕ ಅವರು ಈ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ವಾಸವಾಗಿದ್ದರು.
ಅತುಲ್ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣವನ್ನು ದಾಖಲಿಸಿದ ಬಳಿಕ ವೈವಾಹಿಕ ವಿವಾದ ಉಂಟಾಗಿದ್ದು,ಅವರ ಪತ್ನಿ ವ್ಯಾಜ್ಯ ಇತ್ಯರ್ಥಕ್ಕಾಗಿ ಮೂರು ಕೋ.ರೂ.ಗಳ ಬೇಡಿಕೆಯನ್ನು ಮುಂದಿರಿಸಿದ್ದಳು.
ಪತ್ನಿ ತನ್ನಿಂದ ಹಣವನ್ನು ಸುಲಿಗೆ ಮಾಡಲು ತಮ್ಮ ನಾಲ್ಕು ವರ್ಷದ ಮಗನನ್ನು ಬಳಸಿಕೊಳ್ಳುತ್ತಿದ್ದಾಳೆ ಎಂದು ಆತ್ಮಹತ್ಯೆ ಪತ್ರದಲ್ಲಿ ಆರೋಪಿಸಿರುವ ಅತುಲ್,ಅಪಾರ್ಟ್ಮೆಂಟ್ನಲ್ಲಿ ‘ಜಸ್ಟೀಸ್ ಈಸ್ ಡ್ಯೂ’ ಎಂದು ಬರೆಯಲಾಗಿದ್ದ ಭಿತ್ತಿಪತ್ರವನ್ನು ನೇತು ಹಾಕಿದ್ದರು,ಜೊತೆಗೆ ತನ್ನ ಬಾಕಿಯಿರುವ ಕೆಲಸಗಳ ಕುರಿತು ಮಾಹಿತಿಗಳನ್ನೂ ಪಟ್ಟಿ ಮಾಡಿಟ್ಟಿದ್ದರು.