ಸೇವಾಲೋಪಕ್ಕಾಗಿ ರೋಗಿಗೆ 10 ಲಕ್ಷ ರೂ.ಪರಿಹಾರ ನೀಡುವಂತೆ ಮಣಿಪಾಲ ಆಸ್ಪತ್ರೆಗೆ ಸುಪ್ರೀಂ ಆದೇಶ
ಶ್ವಾಸಕೋಶ ಶಸ್ತ್ರಚಿಕಿತ್ಸೆ ಬಳಿಕ ಧ್ವನಿಯನ್ನು ಕಳೆದುಕೊಂಡಿದ್ದ ರೋಗಿ
ಸುಪ್ರೀಂ | Photo : PTI
ಹೊಸದಿಲ್ಲಿ : ಸೇವಾ ಲೋಪಕ್ಕಾಗಿ ಈಗ ಮೃತಪಟ್ಟಿರುವ ರೋಗಿಯ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸುವಂತೆ ಸರ್ವೋಚ್ಛ ನ್ಯಾಯಾಲಯವು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಆದೇಶಿಸಿದೆ. ಜಿ.ಡಗ್ಲಾಸ್ ಲೂಯಿಸ್ ಅವರು 2003ರಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಶ್ವಾಸಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಬಳಿಕ ಅವರು ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದರು.
ಸೇವಾ ನ್ಯೂನತೆಗಾಗಿ ಪರಿಹಾರ ಕೋರಿ ಅವರು ಬೆಂಗಳೂರು ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ಅದು ಅವರಿಗೆ ಐದು ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಮಣಿಪಾಲ ಆಸ್ಪತ್ರೆಗೆ ಆದೇಶಿಸಿತ್ತು. ಆದರೆ ಹೆಚ್ಚಿನ ಪರಿಹಾರವನ್ನು ಕೋರಿ ಅವರು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆ ನಡೆಯುತ್ತಿದ್ದಾಗಲೇ 2015ರಲ್ಲಿ ಲೂಯಿಸ್ ಮೃತಪಟ್ಟಿದ್ದರು. ಬಳಿಕ ಅವರ ಪತ್ನಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಶಸ್ತ್ರಚಿಕಿತ್ಸೆ ಸಂದರ್ಭ ಅರಿವಳಿಕೆ ವಿಭಾಗದ ಮುಖ್ಯಸ್ಥರು ರೋಗಿಗೆ ಅರಿವಳಿಕೆ ನೀಡಬೇಕಾಗಿತ್ತಾದರೂ ಹೃದ್ರೋಗ ಅರಿವಳಿಕೆ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯರೋರ್ವರು ಅರಿವಳಿಕೆ ಚುಚ್ಚುಮದ್ದನ್ನು ನೀಡಿದ್ದರು ಎನ್ನುವುದನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ವಿಚಾರಣೆ ಸಂದರ್ಭದಲ್ಲಿ ಗಮನಕ್ಕೆ ತೆಗೆದುಕೊಂಡಿತು. ನ್ಯಾಯಯುತ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ವೇದಿಕೆಯು ಈ ಎಲ್ಲ ಅಂಶಗಳನ್ನು ಪರಿಗಣಿಸಬೇಕಿತ್ತು, ಆದರೆ ಈ ಪ್ರಕರಣದಲ್ಲಿ ಹಾಗೆ ಆಗಿಲ್ಲ ಎಂದು ಹೇಳಿದ ಪೀಠವು ಪರಿಹಾರದ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಿತು.
ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದ್ದಾಗ ದೂರುದಾರರು ಮೃತಪಟ್ಟಿದ್ದಾರೆ. ಹೀಗಾಗಿ ಸಾಕ್ಷ್ಯಗಳ ಮರುಪರಿಶೀಲನೆಗೆ ನಿರ್ದೇಶನ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪೀಠವು ಹೇಳಿತು.
ಲೂಯಿಸ್ ಖಾಸಗಿ ಸಂಸ್ಥೆಯಲ್ಲಿ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿದ್ದರು. ಮಾತನಾಡುವ ಶಕ್ತಿಯನ್ನು ಕಳೆದುಕೊಂಡಿದ್ದ ಅವರು 2003ರಿಂದ ಯಾವುದೇ ಬಡ್ತಿಯಲ್ಲದೆ 2015ರಲ್ಲಿ ಸಾಯುವವರೆಗೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ ಅರ್ಜಿದಾರರ ಪರ ವಕೀಲರು, ಆಸ್ಪತ್ರೆಯಿಂದ ಸೇವಾ ನ್ಯೂನತೆಯಾಗಿದ್ದು ಗೊತ್ತಾದ ಬಳಿಕವೂ ವೇದಿಕೆಯು ಕೇವಲ ಐದು ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದೆ. ತನ್ನ ಕಕ್ಷಿದಾರರಿಗೆ 18 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಕೋರಿದ್ದರು.
ಪ್ರಕರಣದಲ್ಲಿ ತಜ್ಞವೈದ್ಯರು ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆಗಳಿಗೆ ಮಣಿಪಾಲ ಆಸ್ಪತ್ರೆಯು ಆಕ್ಷೇಪವನ್ನು ವ್ಯಕ್ತಪಡಿಸಿರಲಿಲ್ಲ ಆಥವಾ ಪ್ರಕರಣದ ಕುರಿತು ಅಭಿಪ್ರಾಯವನ್ನು ತಿಳಿಸಲು ತಜ್ಞ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಅರ್ಜಿಯನ್ನೂ ಸಲ್ಲಿಸಿರಲಿಲ್ಲ ಎಂದು ಪೀಠವು ಬೆಟ್ಟು ಮಾಡಿತು.