‘ಚುನಾವಣೆಗೆ ಕ್ರಿಪ್ಟೋ ನಿಧಿ ಬಳಕೆ’ | ಆರೋಪ ತಿರಸ್ಕರಿಸಿದ ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ | PC : PTI
ಮುಂಬೈ: ಮಹಾರಾಷ್ಟ್ರ ವಿಧಾನ ಸಬೆ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲು ಕಾನೂನು ಬಾಹಿರ ಬಿಟ್ ಕಾಯಿನ್ ವರ್ಗಾವಣೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂಬ ಬಿಜೆಪಿಯ ಆರೋಪವನ್ನು ಸಂಸದೆ ಹಾಗೂ ಎನ್ಸಿಪಿ (ಶರದ್ ಪವಾರ್ ಬಣ)ಯ ನಾಯಕಿ ಸುಪ್ರಿಯಾ ಸುಳೆ ಬುಧವಾರ ನಿರಾಕರಿಸಿದ್ದಾರೆ.
‘‘ಇದು ನನ್ನ ಧ್ವನಿ ಅಲ್ಲ. ಈ ಎಲ್ಲಾ ಮಾತುಗಳು ಹಾಗೂ ಸಂದೇಶಗಳು ನಕಲಿ’’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತಿಪಕ್ಷವಾದ ಮಹಾ ವಿಕಾಸ ಅಘಾಡಿ (ಎಂವಿಎ) ಪರವಾಗಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಬಿಟ್ಕಾಯಿನ್ಗಳ ಕಾನೂನು ಬಾಹಿರ ವಹಿವಾಟಿನಲ್ಲಿ ತೊಡಗಿಕೊಳ್ಳಲು ಸುಳೆ ಹಾಗೂ ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಾಟೋಲೆ ಅವರು ಮಾಜಿ ಪೊಲೀಸ್ ಆಯುಕ್ತ ಹಾಗೂ ವ್ಯಾಪಾರಿಯೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಇದಕ್ಕೆ ಪೂರಕವಾಗಿ ಆಡಿಯೊ ತುಣಕೊಂದನ್ನು ಕೇಳಿಸಿದ್ದರು. ಇದಾದ ಒಂದು ದಿನದ ಬಳಿಕ ಈ ಆರೋಪವನ್ನು ಸುಳೆ ಅವರು ನಿರಾಕರಿಸಿದ್ದಾರೆ.
‘‘ನಕಲಿ ಧ್ವನಿಯನ್ನು ಸೃಷ್ಟಿಸಲಾಗಿದೆ. ಪಿತೂರಿಗಾರರು ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ. ಇದು ನನ್ನ ಧ್ವನಿಯಾಗಲಿ, ನಾನಾ ಪಾಟೋಲೆ ಅವರ ಧ್ವನಿಯಾಗಲಿ ಅಲ್ಲ’’ ಎಂದು ಅವರು ಹೇಳಿದ್ದಾರೆ.
‘‘ನಾನು ಬಿಟ್ಕಾಯಿನ್ ಹಾಗೂ ಕ್ರಿಪ್ಟೋ ಕರೆನ್ಸಿ ವಿರುದ್ಧ ಮಾತನಾಡಿದ್ದೇನೆ. ಅದರ ಬಗ್ಗೆ ಗಂಭೀರ ಕಳವಳವನ್ನು ಎತ್ತಿದ್ದೇನೆ. ಅವರಿಗೆ (ಬಿಜೆಪಿ)ಗೆ ಉತ್ತರಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಯಾಕೆಂದರೆ ಸಂಪೂರ್ಣ ಪಾರದರ್ಶಕತೆ ಬಯಸುವವಳು ನಾನು. ಯಾವುದೇ ಪುರಾವೆ ಇಲ್ಲದೆ, ಕೇವಲ ಆರೋಪದ ಆಧಾರದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಲಾರರು ಎಂಬ ನಂಬಿಕೆ ನನಗಿದೆ’’ ಎಂದು ಅವರು ಹೇಳಿದ್ದಾರೆ.
‘‘ನನಗೆ ಇದರ ಬಗ್ಗೆ ಏನೂ ತಿಳಿದಿಲ್ಲ. ಆದುದರಿಂದಲೇ ನಾನು ಮೊದಲು ಸೈಬರ್ ಕ್ರೈಮ್ ಗೆ ದೂರು ನೀಡಿದೆ ಹಾಗೂ ಮಾನನಷ್ಟ ನೋಟಿಸ್ ಕಳುಹಿಸಿದೆ’’ ಎಂದು ಸುಳೆ ಹೇಳಿದ್ದಾರೆ.