ಸೂರತ್: ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಗುಜರಾತ್ ಹೈಕೋರ್ಟ್ಗೆ ಅರ್ಜಿ
ಮುಕೇಶ್ ದಲಾಲ್ | PC : PTI
ಅಹ್ಮದಾಬಾದ್: ಸೂರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಸೋಮವಾರ ಮನವಿಯೊಂದನ್ನು ಸಲ್ಲಿಸಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾಧಿಕಾರಿಯ ನಿರ್ಧಾರ ಪ್ರಜಾಪ್ರತಿನಿಧಿ ಕಾಯ್ದೆ (ಆರ್ಪಿಎ), 1951ಕ್ಕೆ ಅನುಗುಣವಾಗಿ ಇಲ್ಲ ಎಂದು ಸೂರತ್ನ ಮತದಾರರು ಎಂದು ಪ್ರತಿಪಾದಿಸಿರುವ ದೂರುದಾರರು ಹೇಳಿದ್ದಾರೆ.
ಚುನಾವಣಾಧಿಕಾರಿ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ನಾಮಪತ್ರವನ್ನು ತಿರಸ್ಕರಿಸಿದ ಹಾಗೂ ಇತರ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದ ಬಳಿಕ ನಾಮಪತ್ರ ಹಿಂಪಡೆಯುವ ಕೊನೆಯ ದಿನ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವರನ್ನು ವಿಜಯಿ ಎಂದು ಘೋಷಿಸಲಾಗಿತ್ತು.
ಈ ಫಲಿತಾಂಶವನ್ನು ಕಾನೂನು ಬಾಹಿರ ಎಂದು ಘೋಷಿಸುಂತೆ ರಿಟ್ ಅರ್ಜಿಯೊಂದು ಕೂಡ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಗುಜರಾತ್ ಉಚ್ಚ ನ್ಯಾಯಾಲಯ ಇದೇ ವಿಷಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ತಿರಸ್ಕರಿಸಿತ್ತು.