ಆ್ಯಂಬುಲೆನ್ಸ್ ದುರ್ಬಳಕೆ ಆರೋಪ: ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲು
ಕೇಂದ್ರ ಸಚಿವ ಸುರೇಶ್ ಗೋಪಿ (PTI)
ತ್ರಿಶೂರ್: ಎಪ್ರಿಲ್ ತಿಂಗಳಲ್ಲಿ ನಡೆದಿದ್ದ ತ್ರಿಶೂರ್ ಪೂರಣ್ ದಿನದಂದು ಆ್ಯಂಬುಲೆನ್ಸ್ ದುರ್ಬಳಕೆ ಮಾಡಿದ ಆರೋಪದ ಮೇಲೆ ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮದ ರಾಜ್ಯ ಸಚಿವ ಸುರೇಶ್ ಗೋಪಿ, ಅಭಿಜಿತ್ ನಾಯರ್ ಹಾಗೂ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ರವಿವಾರ ಪೂರ್ವ ತ್ರಿಶೂರ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279, ಹಾಗೂ ಸೆಕ್ಷನ್ 34 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 179, 184, 188 ಹಾಗೂ 192ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ನಿರ್ಬಂಧಗಳನ್ನು ಉಲ್ಲಂಘಿಸಿ, ಪೂರಣ್ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತಲುಪಲು ಸುರೇಶ್ ಗೋಪಿ ಆ್ಯಂಬುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಿಪಿಐ ನಾಯಕ ಕೆ.ಪಿ.ಸುಮೇಶ್ ದಾಖಲಿಸಿದ್ದ ದೂರನ್ನು ಆಧರಿಸಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಫ್ಐಆರ್ ಪ್ರಕಾರ, ತ್ರಿಶೂರ್ ಲೋಕಸಭಾ ಕ್ಷೇತ್ರದ ಅಂದಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಸುರೇಶ್ ಗೋಪಿ, ಪೊಲೀಸರ ನಿರ್ಬಂಧಗಳನ್ನು ಉಲ್ಲಂಘಿಸಿ, ತಿರುವಂಬಾಡಿ ದೇವಸ್ವೋಮ್ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಲು ಕೇವಲ ರೋಗಿಗಳನ್ನು ಕರೆದೊಯ್ಯಲು ಮಾತ್ರ ಪರವಾನಗಿ ಹೊಂದಿದ್ದ ಸೇವಾ ಭಾರತಿ ಮಾಲಕತ್ವದ ಆ್ಯಂಬುಲೆನ್ಸ್ ನಲ್ಲಿ ಪ್ರಯಾಣಿಸಿದ್ದರು. ಈ ಕೃತ್ಯವನ್ನು ಅವರು ಚುನಾವಣಾ ತಂತ್ರದ ಭಾಗವಾಗಿ ಮಾಡಿದ್ದರು ಎಂದು ಆರೋಪಿಸಲಾಗಿದೆ.