ಮಣಿಪುರ| ಪೊಲೀಸ್ ಔಟ್ ಪೋಸ್ಟ್ ಗಳ ಮೇಲೆ ದಾಳಿ, ಮನೆಗಳಿಗೆ ಬೆಂಕಿ ಹಚ್ಚಿದ ಶಂಕಿತ ಬಂಡುಕೋರರು
Photo: NDTV
ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿರುವ ನದಿಯ ಮೂಲಕ ಮೂರ್ನಾಲ್ಕು ದೋಣಿಗಳಲ್ಲಿ ಬಂದಿರುವ ಶಂಕಿತ ಬಂಡುಕೋರರು, ಪೊಲೀಸರ ಹಲವಾರು ಔಟ್ ಪೋಸ್ಟ್ ಗಳ ಮೇಲೆ ದಾಳಿ ನಡೆಸಿ, ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು NDTV ಸುದ್ದಿ ಸಂಸ್ಥೆ ವರದಿ ಮಾಡಿದ. ಜಿರಿಬಾಮ್ ಜಿಲ್ಲೆಯ ಬರಾಕ್ ನದಿಯ ದಂಡೆಯ ಮೇಲಿರುವ ಛೋಟೊಬೆಕ್ರಾದಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜಿರಿಬಾಮ್ ಜಿಲ್ಲೆಯು ಮಣಿಪುರ ರಾಜಧಾನಿ ಇಂಫಾಲದಿಂದ 200 ಕಿಮೀ ದೂರವಿದ್ದು, ಅಸ್ಸಾಂನ ಗಡಿಗೆ ಹೊಂದಿಕೊಂಡಂತಿದೆ. ಈ ಜಿಲ್ಲೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 37 ಹಾದು ಹೋಗುತ್ತದೆ. ಹೆದ್ದಾರಿಯನ್ನು ಸುತ್ತುವರಿದಿರುವ ಕಣಿವೆಗಳಲ್ಲಿ ಹಲವಾರು ಕುಕಿ ಸಮುದಾಯದ ಗ್ರಾಮಗಳಿವೆ.
ಶಂಕಿತ ಬಂಡುಕೋರರು ನದಿಗುಂಟ ಇರುವ ಗ್ರಾಮಗಳ ಮೇಲೆ ದಾಳಿ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಶಂಕಿತ ಬಂಡುಕೋರರು ಇಂದು ಮುಂಜಾನೆ ಮನೆಗಳಿಗೆ ಬೆಂಕಿ ಹಚ್ಚಿ, ಸಂಭ್ರಮಿಸಿರುವ ದೃಶ್ಯಗಳನ್ನು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕುಕಿ ಸಮುದಾಯದ ಬಂಡುಕೋರರು 59 ವರ್ಷದ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ನಂತರ, ಮಣಿಪುರದಲ್ಲಿ ಮತ್ತೆ ಜನಾಂಗೀಯ ಸಂಘರ್ಷ ಸ್ಫೋಟಗೊಂಡಿರುವುದರಿಂದ ಜಿರಿಬಾಮ್ ಪಟ್ಟಣದ ಹೊರವಲಯದಲ್ಲಿ ವಾಸಿಸುತ್ತಿರುವ ಮೈತೈ ಸಮುದಾಯದ 250 ಸದಸ್ಯರನ್ನು ಶುಕ್ರವಾರ ಅಸ್ಸಾಂ ರೈಫಲ್ಸ್ ತೆರವುಗೊಳಿಸಿದೆ.