ವಕ್ಫ್ ಕಾಯ್ದೆಯನ್ನು ಮರುಪರಿಶೀಲಿಸಿ: ಕೇಂದ್ರ ಸರಕಾರಕ್ಕೆ ಮಾಯಾವತಿ ಆಗ್ರಹ

ಮಾಯಾವತಿ | PC : PTI
ಲಕ್ನೊ: ವಕ್ಫ್ ಕಾಯ್ದೆಯಲ್ಲಿ ಅಳವಡಿಸಲಾಗಿರುವ ನಿಯಮಗಳನ್ನು ಮರುಪರಿಶೀಲಿಸಬೇಕು ಎಂದು ಗುರುವಾರ ಆಗ್ರಹಿಸಿದ ಬಿಎಸ್ಪಿ ಮುಖ್ಯನಸ್ಥೆ ಮಾಯಾವತಿ, ಸದ್ಯದ ಮಟ್ಟಿಗೆ ವಕ್ಫ್ ಕಾಯ್ದೆಯನ್ನು ಅಮಾನತಿನಲ್ಲಿಡಬೇಕು ಎಂದೂ ಒತ್ತಾಯಿಸಿದರು.
ಗುರುವಾರ ಲಕ್ನೊದಲ್ಲಿ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿದ ಬಿಎಸ್ಪಿ ಮುಖ್ಯಸ್ಥೆ, ವಕ್ಫ್ ಮಂಡಳಿಗೆ ಮುಸ್ಲಿಮೇತರ ಸದಸ್ಯರನ್ನು ನೇಮಕ ಮಾಡಲು ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ವಕ್ಫ್ ಕಾಯ್ದೆಯಲ್ಲಿ ನೀಡಲಾಗಿರುವ ಅವಕಾಶವು ಮೇಲ್ನೋಟಕ್ಕೆ ಉತ್ತಮವಾಗಿರುವಂತೆ ಕಂಡು ಬರುತ್ತಿಲ್ಲ ಎಂದು ಆಕ್ಷೇಪಿಸಿದರು.
“ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ನೇಮಿಸಲು ಒದಗಿಸಿರುವ ಅವಕಾಶವು ತಪ್ಪಿನಂತೆ ಕಂಡು ಬರುತ್ತಿದ್ದು, ಮುಸ್ಲಿಂ ಸಮುದಾಯ ಕೂಡಾ ಈ ಕುರಿತು ತನ್ನ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇಂತಹ ವಿವಾದಾತ್ಮಕ ನಿಯಮಗಳನ್ನು ಸುಧಾರಿಸಲು ಕೇಂದ್ರ ಸರಕಾರವು ವಕ್ಫ್ ಕಾಯ್ದೆಯನ್ನು ಮರುಪರಿಗಣಿಸಬೇಕು ಹಾಗೂ ಅಮಾನತಿನಲ್ಲಿಡಬೇಕು” ಎಂದು ಅವರು ಆಗ್ರಹಿಸಿದರು.
ಎಪ್ರಿಲ್ 4ರಂದು 13 ಗಂಟೆಗಳ ಸುದೀರ್ಘ ಚರ್ಚೆಯ ನಂತರ, ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ, 2025 ಅನ್ನು ರಾಜ್ಯಸಭೆ ಅಂಗೀಕರಿಸಿದ ನಂತರ, ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿದ್ದ ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದರು.