ರಾಹುಲ್ ಗಾಂಧಿ ಭಾಷಣ ಹಿಂದೂ ಧರ್ಮಕ್ಕೆ ವಿರುದ್ಧವಾಗಿರಲಿಲ್ಲ: ಸ್ವಾಮಿ ಅವಿಮುಕ್ತೇಶ್ವರಾನಂದ
"ರಾಹುಲ್ ಭಾಷಣ ತಿರುಚಿದವರಿಗೆ ಶಿಕ್ಷೆಯಾಗಬೇಕು"
ಸ್ವಾಮಿ ಅವಿಮುಕ್ತೇಶ್ವರಾನಂದ / ರಾಹುಲ್ ಗಾಂಧಿ
ಹೊಸದಿಲ್ಲಿ: ವಿವಾದವನ್ನು ಸೃಷ್ಟಿಸಿದ್ದ, ಪ್ರತಿಪಕ್ಷ ನಾಯಕರಾಗಿ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಾಡಿದ್ದ ಮೊದಲ ಭಾಷಣವನ್ನು ಜ್ಯೋತಿರ್ಮಠದ 46ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಬೆಂಬಲಿಸಿದ್ದಾರೆ.
ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ರಾಹುಲ್, ಬಿಜಿಪಿ ನಾಯಕರು ಕೋಮುವಾದದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಾಹುಲ್ ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಬಣ್ಣಿಸಿದ್ದಾರೆ ಎಂದು ಹೇಳಿದ್ದರು.
ರವಿವಾರ ವಿವಾದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು, ರಾಹುಲ್ ಭಾಷಣ ಹಿಂದೂ ಧರ್ಮಕ್ಕೆ ವಿರುದ್ಧವಾಗಿರಲಿಲ್ಲ ಎಂದು ಪ್ರತಿಪಾದಿಸಿದರು. ‘ನಾವು ರಾಹುಲ್ ಗಾಂಧಿಯವರ ಇಡೀ ಭಾಷಣವನ್ನು ಕೇಳಿದ್ದೇವೆ. ಹಿಂದು ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ ’ಎಂದರು.
ರಾಹುಲ್ರ ಹೇಳಿಕೆಯ ಒಂದು ಭಾಗವನ್ನು ಹರಡುವುದು ಸರಿಯಲ್ಲ ಮತ್ತು ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು.
ರಾಹುಲ್ ಭಾಷಣ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಸ್ಪೀಕರ್ ರಾಹುಲ್ ಭಾಷಣದಲ್ಲಿಯ ಹಲವಾರು ಹೇಳಿಕೆಗಳನ್ನು ಕಡತದಿಂದ ಅಳಿಸಿದ್ದರು. ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ರಾಹುಲ್ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಆಗ್ರಹಿಸಿದ್ದರು.
ರಾಹುಲ್ರನ್ನು ಬೆಂಬಲಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,‘ನನ್ನ ಸೋದರ (ರಾಹುಲ್) ಎಂದಿಗೂ ಹಿಂದುಗಳ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ಅವರು ಬಿಜೆಪಿ ಮತ್ತು ಬಿಜೆಪಿ ನಾಯಕರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದರು