ಸಿಂಧೂ ಜಲ ಒಪ್ಪಂದ ಕೈಬಿಡುವ ಘೋಷಣೆ ಜನರನ್ನು ಮೂರ್ಖರನ್ನಾಗಿಸುವ ತಂತ್ರ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ
ಸಿಂಧೂ ನದಿ ನೀರನ್ನು ನಿಲ್ಲಿಸಲು 20 ವರ್ಷ ಬೇಕಾದಿತು ಎಂದ ಸ್ವಾಮೀಜಿ

ಹೊಸದಿಲ್ಲಿ: ಪಹಲ್ಲಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಪಾಕ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾದ ಭಾರತ ಸರಕಾರ ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ಕೈಬಿಡುವ ಬಗ್ಗೆ ಘೋಷಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಇದು ಜನರನ್ನು ಮೂರ್ಖರನ್ನಾಗಿ ಮಾಡುವ ಘೋಷಣೆಯಷ್ಟೇ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಂಕರಾಚಾರ್ಯ ಸ್ವಾಮಿ, ಸಿಂಧೂ ನದಿ ನೀರನ್ನು ನಿಲ್ಲಿಸಲು ಮೋದಿ ಸರಕಾರದ ಬಳಿ ಯಾವುದೇ ವ್ಯವಸ್ಥೆಯಿಲ್ಲ. ಇದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬುವುದನ್ನು ಬಿಟ್ಟುಬಿಡಿ. ನದಿ ನೀರು ಪಾಕಿಸ್ತಾನಕ್ಕೆ ಹರಿಯದಂತೆ ತಡೆಯಲು ವ್ಯವಸ್ಥೆ ಸಿದ್ಧಪಡಿಸಲು ಭಾರತಕ್ಕೆ ಕನಿಷ್ಠ 20 ವರ್ಷಗಳು ಬೇಕಾಗಬಹುದು. ಇದರರ್ಥ ಕೇಂದ್ರ ಸರಕಾರ ಸಾರ್ವಜನಿಕರನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪಹಲ್ಲಾಮ್‌ನಲ್ಲಿ ಹಿಂದೂಗಳ ಮೇಲಿನ ದಾಳಿಯು ಯೋಜಿತ ಪಿತೂರಿಯ ಭಾಗವಾಗಿದೆ. ಒಬ್ಬರ ಧರ್ಮ ಯಾವುದೆಂದು ಕೇಳಿ ಅವರನ್ನು ಕೊಲ್ಲುವುದು ಅನಾಗರಿಕತೆಯ ಸಂಕೇತ. ಇದು ಭಯೋತ್ಪಾದಕರಿಂದ ಯುದ್ಧದ ನೇರ ಎಚ್ಚರಿಕೆಯಾಗಿದೆ. ಸರಕಾರ ಈ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸಿಂಧೂ ನದಿ ನೀರು ಒಪ್ಪಂದವನ್ನು ಕೊನೆಗೊಳಿಸುತ್ತೇವೆ ಎಂದು ಹೇಳಿಕೊಂಡು ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಮೊದಲನೆಯದಾಗಿ, ಭಯೋತ್ಪಾದಕ ದಾಳಿಗೆ ಕಾರಣರಾದವರನ್ನು ಗುರುತಿಸಿ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನಕ್ಕೆ ನದಿ ನೀರು ಸರಬರಾಜು ಸ್ಥಗಿತಗೊಳಿಸುವುದು ನಿಜವಾಗಿಯೂ ಸಾಧ್ಯವೇ? ನೀರು ಸರಬರಾಜು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕುವುದರಿಂದ ಈ ಭಯೋತ್ಪಾದಕ ಚಟುವಟಿಕೆ ನಿಲ್ಲುವುದಿಲ್ಲ. ಭಯೋತ್ಪಾದಕರ ವಿರುದ್ಧ ನೇರವಾದ ಕ್ರಮವನ್ನು ಕೈಗೊಳ್ಳಬೇಕು. ಮೋದಿ ಸರಕಾರ ಮತ್ತು ಜಮ್ಮುಕಾಶ್ಮೀರದ ಉಮರ್ ಅಬ್ದುಲ್ಲಾ ಸರಕಾರ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಭಯೋತ್ಪಾದಕರು ಪಹಲ್ಗಾಮ್ ಪ್ರವೇಶಿಸಿ ಪ್ರವಾಸಿಗರನ್ನು ಹೇಗೆ ಗುರಿಯಾಗಿಸಿಕೊಂಡರು? ಸುರಕ್ಷಿತ ಕಾಶ್ಮೀರದ ಕುರಿತು ನಿಮ್ಮ ಹೇಳಿಕೆಗಳು ಈಗ ಎಲ್ಲಿಗೆ ಹೋಗಿವೆ? ವಿಧಿ 370ರ ರದ್ಧತಿ ಬಳಿಕ ಕಾಶ್ಮೀರದಲ್ಲಿ ಶಾಂತಿಯ ಭರವಸೆಗಳು ಏನಾದವು? ಎಂದು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.