ಸ್ವಾತಿ ಮಲಿವಾಲ್ಗೆ ಹಲ್ಲೆ ಪ್ರಕರಣ | ಬಿಭವ್ ಕುಮಾರ್ ನ್ಯಾಯಾಂಗ ಬಂಧನ ಜೂ. 22ರ ವರೆಗೆ ವಿಸ್ತರಣೆ
ಬಿಭವ್ ಕುಮಾರ್ | PTI
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಇಲ್ಲಿನ ನ್ಯಾಯಾಲಯ ಶನಿವಾರ ಜೂನ್ 22ರ ವರೆಗೆ ವಿಸ್ತರಿಸಿದೆ.
ಮುಖ್ಯಮಂತ್ರಿ ಅವರ ಅಧಿಕೃತ ನಿವಾಸದಲ್ಲಿ ಮೇ 31ರಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರಿಗೆ ಹಲ್ಲೆಗೈದ ಆರೋಪವನ್ನು ಕುಮಾರ್ ಎದುರಿಸುತ್ತಿದ್ದಾರೆ.
ಕುಮಾರ್ ಅವರನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಮೆಟ್ರೋಪಾಲಿಟಿನ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಅವರು ಕುಮಾರ್ ಅವರ ಕಸ್ಟಡಿಯನ್ನು ವಿಸ್ತರಿಸಿದರು ಹಾಗೂ ಅವರನ್ನು ಜೂನ್ 22ರಂದು ಹಾಜರುಪಡಿಸುಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶಿಸಿದರು.
ಇದಕ್ಕೂ ಒಂದು ದಿನ ಮುನ್ನ ಶುಕ್ರವಾರ ತನಿಖಾಧಿಕಾರಿ ಹಾಜರಾಗದೇ ಇರುವುದನ್ನು ಗಮನಿಸಿದ ಬಳಿಕ ನ್ಯಾಯಾಲಯ ಕುಮಾರ್ ಅವರ ಕಸ್ಟಡಿಯನ್ನು ಒಂದು ದಿನ ವಿಸ್ತರಿಸಿತ್ತು.
ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೇ 18ರಂದು ಕುಮಾರ್ ಅವರನ್ನು ಬಂಧಿಸಲಾಗಿತ್ತು. ಅದೇ ದಿನ ದಂಡಾಧಿಕಾರಿ ಅವರ ನ್ಯಾಯಾಲಯ ಕುಮಾರ್ ಅವರಿಗೆ 5 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿತ್ತು. ಈಗಾಗಲೇ ಕುಮಾರ್ ಅವರನ್ನು ಪೊಲೀಸರು ಬಂಧಿಸಿರುವುದರಿಂದ ಅವರ ನಿರೀಕ್ಷಣಾ ಜಾಮೀನು ನಿಷ್ಪ್ರಯೋಜಕ ಎಂದು ನ್ಯಾಯಾಲಯ ಅಭಿಪ್ರಾಯಿಸಿತ್ತು. ಕುಮಾರ್ ಅವರನ್ನು ಮೇ 24ರಂದು 4 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಅನಂತರ ಮೂರು ದಿನಗಳು ಪೊಲೀಸ್ ಕಸ್ಟಡಿಗೆ ನೀಡಿತ್ತು.
ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿ ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮೇ 16ರಂದು ಎಫ್ಐಆರ್ ದಾಖಲಿಸಲಾಗಿತ್ತು.