ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ | ಬಂಧನದ ವಿರುದ್ಧ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಬಿಭವ್ ಕುಮಾರ್

ದಿಲ್ಲಿ ಉಚ್ಛ ನ್ಯಾಯಾಲಯ , ಬಿಭವ್ ಕುಮಾರ್ | PC : PTI
ಹೊಸದಿಲ್ಲಿ : ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿ ತನ್ನ ಬಂಧನವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಬುಧವಾರ ದಿಲ್ಲಿ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತನ್ನ ಬಂಧನವನ್ನು ಕಾನೂನು ಬಾಹಿರ, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 ನಿಯಮಗಳ ಸಂಪೂರ್ಣ ಉಲ್ಲಂಘನೆ ಹಾಗೂ ಕಾನೂನಿಗೆ ವಿರುದ್ಧವಾದುದು ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಬಿಭವ್ ಕುಮಾರ್ ಅವರು ತನ್ನ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ತನ್ನ ಕಾನೂನು ಬಾಹಿರ ಬಂಧನಕ್ಕೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ತನ್ನ ಬಂಧನದ ಕುರಿತಂತೆ ನಿರ್ಧಾರ ತೆಗೆದುಕೊಂಡಿರುವುದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಆರಂಭಿಸುವಂತೆ ಕೂಡ ಅವರು ಮನವಿಯಲ್ಲಿ ಕೋರಿದ್ದಾರೆ.
ಬಿಭವ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ಸೆಷನ್ಸ್ ನ್ಯಾಯಾಲಯ ಸೋಮವಾರ ತಿರಸ್ಕರಿಸಿತ್ತು. ಮಲಿವಾಲ್ ಅವರು ಎಫ್ಐಆರ್ ದಾಖಲಿಸಿರುವುದು ಪೂರ್ವಯೋಜಿತವೆಂದು ಕಂಡು ಬಂದಿಲ್ಲ. ಆದುದರಿಂದ ಅವರ ಆರೋಪವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು.
ಮೇ 13ರಂದು ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ವಿಭವ್ ಕುಮಾರ್ ಅವರು ತನಗೆ ಹಲ್ಲೆ ನಡೆಸಿದ್ದಾರೆ ಎಂದು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಬಿಭವ್ ಕುಮಾರ್ ಅವರನ್ನು ಮೇ 18ರಂದು ಬಂಧಿಸಲಾಗಿತ್ತು. ಅನಂತರ ಅವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಅದೇ ದಿನ ದಂಡಾಧಿಕಾರಿ ಅವರು ಬಿಭವ್ ಕುಮಾರ್ ಅವರನ್ನು ಈಗಾಗಲೇ ಬಂಧಿಸಿರುವುದರಿಂದ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ನಿಷ್ಪ್ರಯೋಜಕ ಎಂದು ಅಭಿಪ್ರಾಯಿಸಿದ್ದರು. ಕಳೆದ ಶುಕ್ರವಾರ ಅವರನ್ನು ನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಬಿಭವ್ ಕುಮಾರ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಮೇ 16ರಂದು ಪ್ರಕರಣ ದಾಖಲಿಸಲಾಗಿತ್ತು.