ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ | ಸಿಎಂ ಕೇಜ್ರಿವಾಲ್ರ ಆಪ್ತ ಬಿಭವ್ ಕುಮಾರ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದ ದಿಲ್ಲಿ ಹೈಕೋರ್ಟ್
ಬಿಭವ್ ಕುಮಾರ್ , ಸ್ವಾತಿ ಮಲಿವಾಲ್ | PC: PTI
ಹೊಸದಿಲ್ಲಿ: ಆಪ್ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ಆಪ್ ಬಿಭವ್ ಕುಮಾರ್ಗೆ ಜಾಮೀನು ನೀಡಬೇಕೋ ಬೇಡವೋ ಎಂಬ ಕುರಿತು ಜುಲೈ 12ರಂದು ಆದೇಶಿಸುವುದಾಗಿ ಬುಧವಾರ ದಿಲ್ಲಿ ಹೈಕೋರ್ಟ್ ಹೇಳಿದೆ.
ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಿಭವ್ ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಬಿಭವ್ ಕುಮಾರ್ ಪರ ವಕೀಲ ಹಾಗೂ ಸ್ವಾತಿ ಮಲಿವಾಲ್ ಮತ್ತು ದಿಲ್ಲಿ ಪೊಲೀಸರ ಪರ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾ. ಅನೂಪ್ ಕುಮಾರ್ ಮೆಂಡಿರಟ್ಟ, ಜಾಮೀನು ಕುರಿತ ತೀರ್ಪನ್ನು ಕಾಯ್ದಿರಿಸಿದರು.
"ತೀರ್ಪನ್ನು ಕಾಯ್ದಿರಿಸಲಾಗಿದ್ದು, ಶುಕ್ರವಾರದಂದು ಪ್ರಕಟಿಸಲಾಗುವುದು" ಎಂದು ಅವರು ಹೇಳಿದರು.
ಬಿಭವ್ ಕುಮಾರ್ ಜಾಮೀನು ಅರ್ಜಿಯನ್ನು ವಿರೋಧಿಸಿದ ಪೊಲೀಸರು, ತನಿಖೆ ಪ್ರಗತಿಯಲ್ಲಿದ್ದು, ಜುಲೈ 16ರೊಳಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಆದರೆ, ಪೊಲೀಸರ ವಾದವನ್ನು ವಿರೋಧಿಸಿದ ಬಿಭವ್ ಕುಮಾರ್ ಪರ ಹಾಜರಿದ್ದ ಅವರ ಹಿರಿಯ ವಕೀಲರು, ತನಿಖೆ ಮುಕ್ತಾಯಗೊಂಡಿರುವುದರಿಂದ, ನನ್ನ ಕಕ್ಷಿದಾರ ಪೊಲೀಸರ ವಶದಲ್ಲಿರಬೇಕಾದ ಅಗತ್ಯವಿಲ್ಲ ಎಂದು ಪ್ರತಿವಾದ ಮಂಡಿಸಿದರು.