ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ಬಿಭವ್ ಕುಮಾರ್ ಗೆ 3 ದಿನಗಳ ಪೊಲೀಸ್ ಕಸ್ಟಡಿ
Photo : PTI
ಹೊಸದಿಲ್ಲಿ: ಆಪ್ ಲೋಕಸಭಾ ಸದಸ್ಯೆ ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರಿಗೆ ಇಲ್ಲಿನ ತೀನ್ ಹಝಾರಿ ನ್ಯಾಯಾಲಯ ಮಂಗಳವಾರ ಮೂರು ದಿನಗಳ ಪೊಲೀಸ್ ಕಸ್ಟಡಿ ನೀಡಿದೆ.
ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಗೌರವ್ ಗೋಯಲ್ ಅವರು ಬಿಭವ್ ಕುಮಾರ್ ಅವರನ್ನು ಮೇ 31ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದರು.
ಬಿಭವ್ ಕುಮಾರ್ ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ದಿಲ್ಲಿ ಪೊಲೀಸರು ಕೋರಿದ್ದರು. ಆದರೆ, ಕಸ್ಟಡಿ ವಿಚಾರಣೆ ಕೋರಿ ದಿಲ್ಲಿ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಬಿಭವ್ ಕುಮಾರ್ ಅವರ ವಕೀಲರು ವಿರೋಧಿಸಿದರು.
ಎಫ್ಐಆರ್ ದಾಖಲಿಸುವಲ್ಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಅವರಿಗೆ ಪೂರ್ವ ಯೋಜನೆ ಇದ್ದಂತೆ ಕಾಣುವುದಿಲ್ಲ. ಆದುದರಿಂದ ಅವರ ಆರೋಪವನ್ನು ತಳ್ಳಿ ಹಾಕುವಂತಿಲ್ಲ ಎಂದು ಹೇಳುವ ಮೂಲಕ ಬಿಭಿವ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ಸೋಮವಾರ ತಿರಸ್ಕರಿಸಿತ್ತು.
ಬಿಭವ್ ಕುಮಾರ್ ಅವರನ್ನು ಮೇ 18ರಂದು ಬಂಧಿಸಲಾಗಿತ್ತು. ದಂಡಾಧಿಕಾರಿಯ ನ್ಯಾಯಾಲಯ ಅದೇ ದಿನ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು. ಅವರ ಬಂಧನವಾಗಿರುವುದರಿಂದ ಅವರ ನಿರೀಕ್ಷಣಾ ಜಾಮೀನು ನಿಷ್ಪ್ರಯೋಜಕ ಎಂದು ಅದು ಅಭಿಪ್ರಾಯಿಸಿತ್ತು. ಕಳೆದ ಶುಕ್ರವಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಮೇ 13ರಂದು ಮಲಿವಾಲ್ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿ ಬಿಭವ್ ಕುಮಾರ್ ಅವರ ವಿರುದ್ಧ ಮೇ 16ರಂದು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.