ಅಮ್ ಆದ್ಮಿ ಜಾಥಾ ಹಿನ್ನೆಲೆ: ಬಿಜೆಪಿ ಕಚೇರಿಗೆ ಸರ್ಪಗಾವಲು
ಎಎಪಿ ಪ್ರತಿಭಟನಾ ಮೆರವಣಿಗೆಗೆ ಅನುಮತಿ ಇಲ್ಲ ಎಂದ ದಿಲ್ಲಿ ಪೊಲೀಸರು
Photo: ANI
ಹೊಸದಿಲ್ಲಿ: ಅಮ್ ಅದ್ಮಿ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ನೀಡಿದ ದೂರಿನ ಆಧಾರದಲ್ಲಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಬಂಧನದ ಬೆನ್ನಲ್ಲೇ, ಬಿಜೆಪಿ ಕಚೇರಿಗೆ ಆಮ್ ಆದ್ಮಿ ಮುಖಂಡರು ಜಾಥಾ ಹಮ್ಮಿಕೊಂಡಿದ್ದಾರೆ. ಈ ಮೆಗಾ ಪ್ರತಿಭಟನೆಗೆ ಎಎಪಿ ಅನುಮತಿ ಪಡೆದಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದು, ಬಿಜೆಪಿ ಕಚೇರಿ ಇರುವ ಡಿಡಿಯು ಮಾರ್ಗದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ದಿಲ್ಲಿ ಪೊಲೀಸ್ ಸಿಬ್ಬಂದಿ, ಕ್ಷಿಪ್ರ ಕಾರ್ಯಪಡೆ ಮತ್ತು ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಧಾನಿ ಮೋದಿಯವರು ಆಮ್ ಆದ್ಮಿ ಪಕ್ಷದ ಜತೆ ಜೈಲಾಟ ಆಡುತ್ತಿದ್ದಾರೆ. ಅವರು ನನ್ನನ್ನು, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಹಾಗೂ ಸಂಜಯ್ ಸಿಂಗ್ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಇಂದು ನನ್ನ ಆಪ್ತ ಸಹಾಯಕನನ್ನು ಕಾರಾಗೃಹಕ್ಕೆ ಕಳುಹಿಸಿದ್ದಾರೆ. ರಾಜೀವ್ ಛಡ್ಡಾ, ಅತಿಶಿ ಹಾಗೂ ಸೌರಭ್ ಭಾರದ್ವಾಜ್ ಅವರನ್ನೂ ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ವಿಡಿಯೊ ಸಂದೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ಯ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದ್ದು, ಇದೀಗ ಚುನಾವಣಾ ಪ್ರಚಾರಕ್ಕಾಗಿ ಜೂನ್ 2ರವರೆಗೆ ಮಧ್ಯಂತರ ಜಾಮೀನು ಪಡೆದಿದ್ದಾರೆ.
ಇಂದಿನ ಪ್ರತಿಭಟನೆ ಹಿನ್ನೆಲೆಯಲ್ಲಿ ದಿಲ್ಲಿ ಮೆಟ್ರೋ ರೈಲು ನಿಗಮ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ ಎಂದು ಹೇಳಿಕೆ ನೀಡಿದೆ.
ಪಕ್ಷದ ಎಲ್ಲ ಮುಖಂಡರನ್ನೂ ಜೈಲಿಗೆ ಕಳುಹಿಸಬೇಕು ಎಂದು ಪ್ರಧಾನಿಗೆ ಇದ್ದರೆ, ಒಂದೇ ಬಾರಿ ಅದನ್ನು ಮಾಡಲಿ ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.