ಸ್ವೀಡಿಷ್ ಪ್ರವಾಸಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಅರ್ಚಕನ ಬಂಧನ
Photo:freepik
ಭುವನೇಶ್ವರ: ಭಾರತಕ್ಕೆ ಪ್ರವಾಸ ಬಂದಿದ್ದ 28 ವರ್ಷದ ಸ್ವೀಡಿಷ್ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭುವನೇಶ್ವರದ ಲಿಂಗರಾಜ ದೇವಸ್ಥಾನದ 24 ವರ್ಷ ವಯಸ್ಸಿನ ಅರ್ಚಕನನ್ನು ಬಂಧಿಸಲಾಗಿದೆ.
ಆರೋಪಿ ಅರ್ಚಕ ಕುಂದನ್ ಮಹಾಪಾತ್ರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಲೈಂಗಿಕ ಹಲ್ಲೆ ಅಥವಾ ಬಲಾತ್ಕಾರದ ಅಪರಾಧ) ಮತ್ತು ಸೆಕ್ಷನ್ 354-ಎ (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಮಹಾಪಾತ್ರ ಪದೇ ಪದೇ ಅಪರಾಧ ಎಸಗಿದ ಆರೋಪಿಯಾಗಿದ್ದು, 2023ರ ಜುಲೈ 9ರಂದು ದೇವಾಲಯ ಬಳಿ ದೇಶೀಯ ಪ್ರವಾಸಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಹಣ ವಸೂಲಿ ಮಾಡಿದ ಅರೋಪದಲ್ಲಿ ಬಂಧಿಸಲಾಗಿತ್ತು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ.
ಈ ಪ್ರಕರಣದಲ್ಲಿ ಲಿಂಗರಾಜ ದೇವಾಲಯದ ಹೊರಗೆ ಫೋಟೊ ತೆಗೆಯುತ್ತಿದ್ದ ವೇಳೆ ಆಕೆಯ ಬಳಿಗೆ ಬಂದ ಆರೋಪಿ ಮಾರ್ಗದರ್ಶನಕ್ಕೆ ಮುಂದಾದ. ದೇಗುಲದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂಬ ಕಾರಣಕ್ಕೆ ಮಂದಿರವನ್ನು ನೋಡಲು ಅನುಕೂಲವಾಗುವಂತೆ ವೀಕ್ಷಣಾ ಗೋಪುರಕ್ಕೆ ಕರೆದೊಯ್ದ. ಬಳಿಕ ಹೊರಗಿದ್ದ ಒಂದು ಪುಟ್ಟ ಮಂದಿರಕ್ಕೆ ಕರೆದೊಯ್ದು ಕಣ್ಣುಮುಚ್ಚಿ ಪ್ರಾರ್ಥನೆ ಮಾಡುವಂತೆ ಸೂಚಿಸಿದ. ಪ್ರಾರ್ಥನೆ ಮಾಡುತ್ತಿದ್ದಾಗ ಅಸಭ್ಯವಾಗಿ ಸ್ಪರ್ಶಿಸಿದ ಎನ್ನಲಾಗಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ, ಆಕೆಯನ್ನು ನಿಂದಿಸಿ, ಕಿರುಕುಳ ನೀಡಿ, ಘನತೆಗೆ ಧಕ್ಕೆ ತಂದ ಎಂದು ಮಹಿಳೆ ದೂರು ನೀಡಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಸ್ವಿಡೀಷ್ ಮಹಿಳೆ ಮೊಟ್ಟಮೊದಲ ಬಾರಿಗೆ ಒಡಿಶಾ ಪ್ರವಾಸ ಕೈಗೊಂಡಿದ್ದು, ಲಿಂಗರಾಜ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ಬಳಿಕ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.