ಶೇರು ಮಾರುಕಟ್ಟೆಗೆ ಸ್ವಿಗ್ಗಿ ಪ್ರವೇಶ | ಕೋಟ್ಯಾಧೀಶರಾದ 500 ಹಾಲಿ ಮತ್ತು ಮಾಜಿ ಉದ್ಯೋಗಿಗಳು
ಸ್ವಿಗ್ಗಿ | PC : Swiggy.com
ಹೊಸದಿಲ್ಲಿ : ಫುಡ್ ಅಗ್ರಿಗೇಟರ್ ಸ್ವಿಗ್ಗಿಯ ಶೇರುಗಳು ಬುಧವಾರ ಶೇರು ಮಾರುಕಟ್ಟೆಯನ್ನು ಪ್ರವೇಶಿಸುವುದರೊಂದಿಗೆ ಅದರ 500ಕ್ಕೂ ಅಧಿಕ ಹಾಲಿ ಮತ್ತು ಮಾಜಿ ಉದ್ಯೋಗಿಗಳು ಕೋಟ್ಯಾಧೀಶರಾಗಿದ್ದಾರೆ.
ಸ್ವಿಗ್ಗಿ ಉದ್ಯೋಗಿ ಶೇರು ಆಯ್ಕೆ ಯೋಜನೆ(ಇಎಸ್ಒಪಿ) ಅಡಿ ತನ್ನ ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ 9,000 ಕೋಟಿ ರೂ.ಮೌಲ್ಯದ ಶೇರುಗಳನ್ನು ಹಂಚಿಕೆ ಮಾಡಿತ್ತು.
ಸ್ವಿಗ್ಗಿಯ ಆರಂಭಿಕ ಶೇರು ಮಾರಾಟ ಪ್ರತಿ ಶೇರಿಗೆ 371-390 ರೂ.ಬೆಲೆ ಶ್ರೇಣಿಯಲ್ಲಿತ್ತು. ಬುಧವಾರ ಬೆಳಿಗ್ಗೆ ಸ್ವಿಗ್ಗಿ ಶೇರುಗಳು ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದಲ್ಲಿ ನೀಡಿಕೆ ಬೆಲೆ (390 ರೂ.)ಗಿಂತ ಶೇ.7.69ರಷ್ಟು ಏರಿಕೆಯೊಂದಿಗೆ ಪ್ರತಿ ಶೇರಿಗೆ 420 ರೂ. ಬೆಲೆಯಲ್ಲಿ ಲಿಸ್ಟ್ ಆಗಿದ್ದವು. ನಂತರವೂ ಶೇರಿನ ನಾಗಾಲೋಟ ಮುಂದುವರಿದಿದ್ದು, ಶೇ.18.97ರಷ್ಟು ಏರಿಕೆಯೊಂದಿಗೆ 464 ರೂ.ಗೆ ಮುಕ್ತಾಯ ಕಂಡಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ 1.04 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಸ್ವಿಗ್ಗಿಯ 11,327 ಕೋಟಿ ರೂ.ಗಳ ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಶೇರು ಮಾರಾಟವು ಶುಕ್ರವಾರ ಅಂತಿಮಗೊಂಡಿದ್ದು, ಕಂಪನಿಯು ಹಂಚಿಕೆಗಿರಿಸಿದ್ದ ಪ್ರಮಾಣಕ್ಕಿಂತ 3.59 ಪಟ್ಟು ಶೇರುಗಳಿಗೆ ಅರ್ಜಿಗಳನ್ನು ಹೂಡಿಕೆದಾರರಿಂದ ಸ್ವೀಕರಿಸಿತ್ತು.