ಟಿ-20 ವಿಶ್ವಕಪ್: ಟೂರ್ನಿಯಿಂದ ಹೊರ ಬಿದ್ದ ವೆಸ್ಟ್ ಇಂಡೀಸ್; ಸೆಮಿಫೈನಲ್ಸ್ಗೆ ದಕ್ಷಿಣ ಆಫ್ರಿಕಾ ಲಗ್ಗೆ
PC : PTI
ಆ್ಯಂಟಿಗುವಾ: ಆತಿಥೇಯ ವೆಸ್ಟ್ ಇಂಡೀಸ್ ತಂಡದ ಎದುರು ನಡೆದ ಸೂಪರ್ ಎಂಟರ ಘಟ್ಟದ ಕೊನೆಯ ಪಂದ್ಯದಲ್ಲಿ 17ನೇ ಓವರ್ನ ಮೊದಲ ಬಾಲ್ ಅನ್ನು ಸಿಕ್ಸರ್ಗೆ ಸಿಡಿಸುವ ಮೂಲಕ ಮಾರ್ಕೊ ಜಾನ್ಸೆನ್ ಹರಿಣಗಳನ್ನು ಸೆಮಿಫೈನಲ್ಸ್ ತಲುಪಿಸಿದ್ದಾರೆ. ಇದರೊಂದಿಗೆ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದೆ.
ಮಳೆಯಿಂದ ಬಾಧಿತವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ಗಳ ಸಾಧಾರಣ ಗುರಿ ನೀಡಿತು. ದಕ್ಷಿಣ ಆಫ್ರಿಕಾ ತಂಡದ ಬೌಲರ್ ತಬ್ರೈಝ್ ಶಂಸಿ ಕೇವಲ 27 ರನ್ ನೀಡಿ, ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.
ನಂತರ ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ತಂಡವು ಆರಂಭಿಕ ಆಘಾತ ಅನುಭವಿಸಿ, ಆ್ಯಂಡ್ರೆ ರಸೆಲ್ ಅವರಿಗೆ ಎರಡು ವಿಕೆಟ್ ಒಪ್ಪಿಸಿತು. ಈ ವೇಳೆ ಮಳೆ ಸುರಿದು ಆಟ ಮೊಟಕುಗೊಂಡಿದ್ದರಿಂದ, ದಕ್ಷಿಣ ಆಫ್ರಿಕಾ ತಂಡಕ್ಕೆ 17 ಓವರ್ಗಳಲ್ಲಿ 123 ರನ್ ಗಳಿಸುವ ಗುರಿಯನ್ನು ನಿಗದಿಪಡಿಸಲಾಯಿತು.
17ನೇ ಓವರ್ ಬೌಲ್ ಮಾಡಿದ ಮೆಕಾಯ್ ಬಾಲನ್ನು ಸಿಕ್ಸರ್ಗೆ ಸಿಡಿಸಿದ ಜಾನ್ಸೆನ್, ಹರಿಣಗಳನ್ನು ಸೆಮಿಫೈನಲ್ಸ್ಗೆ ತಲುಪಿಸುವಲ್ಲಿ ಯಶಸ್ವಿಯಾದರು.
ಎರಡನೆ ಗುಂಪಿನಲ್ಲಿ ಸತತ ಮೂರು ಗೆಲುವು ಸಾಧಿಸುವ ಮೂಲಕ ಗುಂಪಿನಲ್ಲಿ ಮೊದಲಿಗರಾಗಿರುವ ದಕ್ಷಿಣ ಆಫ್ರಿಕಾ ತಂಡವು, ಮೊದಲನೆ ಗುಂಪಿನಲ್ಲಿ ಎರಡನೆ ತಂಡವಾಗಿ ಹೊರಹೊಮ್ಮಲಿರುವ ತಂಡವನ್ನು ಸೆಮಿಫೈನಲ್ಸ್ನಲ್ಲಿ ಎದುರಿಸಲಿದೆ.