ಬರೆದಿಟ್ಟುಕೊಳ್ಳಿ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಇಂಡಿಯಾ ಮೈತ್ರಿಕೂಟ ಪರಾಭವಗೊಳಿಸಲಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಸೋಮವಾರ ಲೋಕಸಭಾ ಅಧಿವೇಶನದಲ್ಲಿ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, "ಬರೆದಿಟ್ಟುಕೊಳ್ಳಿ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಪರಾಭವಗೊಳಿಸಲಿದೆ" ಎಂದು ಬಿಜೆಪಿಗೆ ಸವಾಲು ಹಾಕಿದ ಘಟನೆ ನಡೆಯಿತು.
ಅಧಿವೇಶನದುದ್ದಕ್ಕೂ ನೀಟ್ ಹಗರಣದಿಂದ ಹಿಡಿದು ಧಾರ್ಮಿಕ ವಿಷಯಗಳವರೆಗೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿಯ ಭಾಷಣದ ಮಧ್ಯೆ ಪ್ರವೇಶಿಸಿದ ಬಿಜೆಪಿ ಸಂಸದರೊಬ್ಬರು, ಅವರ ಗುಜರಾತ್ ಭೇಟಿಗಳ ಕುರಿತು ಪ್ರಶ್ನಿಸಿದರು. ಈ ಪ್ರಶ್ನೆಯು ಗುಜರಾತ್ ನ್ಯಾಯಾಲಯವೊಂದು ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು ಹಾಗೂ ಅವರನ್ನು ಸಂಸದ ಸ್ಥಾನದಿಂದ ತಾತ್ಕಾಲಿಕವಾಗಿ ಅನರ್ಹಗೊಳಿಸಿದ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಗುಜರಾತ್ ಬಗೆಗಿನ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. "ನಾನು ಗುಜರಾತ್ಗೆ ಭೇಟಿ ನೀಡುತ್ತಲೇ ಇರುತ್ತೇನೆ. ನಾನು ಈ ಬಾರಿ ನಿಮ್ಮನ್ನು ಗುಜರಾತ್ನಲ್ಲಿ ಸೋಲಿಸುತ್ತೇನೆ. ಬರೆದಿಟ್ಟುಕೊಳ್ಳಿ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ನಿಮ್ಮನ್ನು ಗುಜರಾತ್ನಲ್ಲಿ ಪರಾಭವಗೊಳಿಸಲಿದೆ" ಎಂದು ಸವಾಲು ಹಾಕಿದರು.