ಧರಣಿ ಸ್ಥಳಾಂತರಕ್ಕೆ ರೈತರ ಜೊತೆ ಮಾತುಕತೆ ನಡೆಸಿ : ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಚಳವಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಅಥವಾ ಪಂಜಾಬ್-ಹರ್ಯಾಣ ಗಡಿಯುದ್ದಕ್ಕೂ ಹಾದು ಹೋಗುವ ಹೆದ್ದಾರಿಯಿಂದ ಬೇರೆ ಕಡೆಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಧರಣಿನಿರತ ರೈತರೊಂದಿಗೆ ಮಾತುಕತೆ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನ್ಯಾಯಾಲಯದಿಂದ ನೇಮಕಗೊಂಡಿರುವ ಉನ್ನತಾಧಿಕಾರ ಸಮಿತಿಗೆ ನಿರ್ದೇಶನ ನೀಡಿದೆ.
ಅದೇ ವೇಳೆ, ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗ್ಜೀತ್ ಸಿಂಗ್ ದಲ್ಲೆವಾಲ್ರ ಕ್ಷೇಮವನ್ನು ಖಾತರಿಪಡಿಸುವಂತೆಯೂ ನ್ಯಾಯಾಲಯವು ಸೂಚಿಸಿದೆ. ಸಿಂಗ್ ರ ಆಮರಣಾಂತ ಉಪವಾಸ ಸತ್ಯಾಗ್ರಹ ಶುಕ್ರವಾರ 18ನೇ ದಿನ ಪ್ರವೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭೂಯನ್ ಅವರನ್ನೊಳಗಂಡ ನ್ಯಾಯಪೀಠವು, ಪ್ರತಿಭಟನೆಯು ಸಾಂವಿಧಾನಿಕ ಹಕ್ಕಾಗಿದೆ ಎಂದು ಹೇಳಿತು. ಆದರೆ, ಅದನ್ನು ‘‘ಗಾಂಧಿ ತತ್ವಗಳಿಗೆ ಅನುಗುಣವಾಗಿ’’ ಶಾಂತಿಯುತವಾಗಿ ನಡೆಸಬೇಕಾಗಿದೆ ಎಂದು ಸಲಹೆ ನೀಡಿತು.
ಹಿಂಸೆಗೆ ಅವಕಾಶ ನೀಡದೆ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂಬುದಾಗಿಯೂ ನ್ಯಾಯಾಲಯ ಹೇಳಿತು.
‘‘ಬಲಪ್ರಯೋಗ ಮಾಡಬಾರದು. ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಶಾಂತಿಯನ್ನು ಕಾಯ್ದುಕೊಳ್ಳಬೇಕು’’ ಎಂದು ನ್ಯಾಯಾಲಯ ಹೇಳಿತು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಫೆಬ್ರವರಿಯಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ರೈತರ ಬೇಡಿಕೆಗಳ ಅಧ್ಯಯನಕ್ಕಾಗಿ ಸುಪ್ರೀಂ ಕೋರ್ಟ್ ಉನ್ನತಾಧಿಕಾರದ ಸಮಿತಿಯೊಂದನ್ನೂ ರಚಿಸಿದೆ.
ಧರಣಿಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಅಥವಾ ತಾತ್ಕಾಲಿಕವಾಗಿ ನಿಲ್ಲಿಸುವಂತೆ ರೈತರ ಮನವೊಲಿಸುವ ಕೆಲಸವನ್ನು ಈ ಸಮಿತಿಯು ಮಾಡಬಹುದಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿತು.