ಲೈಂಗಿಕ ದೌರ್ಜನ್ಯದ ಅಪರಾಧಿಗಳಿಗೆ ಚಿತ್ರರಂಗದಿಂದ 5 ವರ್ಷ ನಿಷೇಧ : ನಿರ್ಣಯ ಅಂಗೀಕರಿಸಿದ ದಕ್ಷಿಣ ಭಾರತೀಯ ಕಲಾವಿದರ ಸಂಘ
Photo : India Today
ತಮಿಳುನಾಡು: ದಕ್ಷಿಣ ಭಾರತೀಯ ಕಲಾವಿದರ ಸಂಘ (SIAA) ಅಥವಾ 'ನಾಡಿಗರ್ ಸಂಗಮ್' ಲೈಂಗಿಕ ದೌರ್ಜನ್ಯಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದ ವ್ಯಕ್ತಿಗಳಿಗೆ ತಮಿಳು ಚಲನಚಿತ್ರೋದ್ಯಮದಿಂದ 5 ವರ್ಷಗಳ ನಿಷೇಧವನ್ನು ವಿಧಿಸುವ ಕುರಿತು ಮಹತ್ವದ ನಿರ್ಣಯವನ್ನು ಅಂಗೀಕರಿಸಿದೆ.
'ನಡಿಗರ್ ಸಂಗಮ್' ಅಥವಾ ಎಸ್ಐಎಎ ಚಲನಚಿತ್ರ, ದೂರದರ್ಶನ ಮತ್ತು ರಂಗ ಭೂಮಿಯ ಪ್ರತಿನಿಧಿಗಳ ವೇದಿಕೆಯಾಗಿದೆ. ಸೆ.4ರಂದು ಎಸ್ಐಎಎ ಲಿಂಗ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿಯ (GSICC) ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ತಮಿಳು ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರಿಗೆ GSICC ಎಲ್ಲಾ ಕಾನೂನು ನೆರವು ನೀಡಲಿದೆ ಎಂದು ನಿರ್ಣಯವು ಹೇಳಿದೆ.
ನಿರ್ಣಯದ ಪ್ರಕಾರ, ಸಂತ್ರಸ್ತರು ತಮ್ಮ ದೂರುಗಳನ್ನು ಈಗಾಗಲೇ ಮೀಸಲಿರಿಸಿದ ಫೋನ್ ಸಂಖ್ಯೆ ಅಥವಾ ಈಮೇಲ್ ಮೂಲಕ ಕಲಾವಿದರ ಸಂಘಕ್ಕೆ ನೀಡಬಹುದು. ಇದಲ್ಲದೆ ಸಂತ್ರಸ್ತರು ತಮ್ಮ ದೂರುಗಳ ನೇರವಾಗಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವ ಮೊದಲು ಸಮಿತಿಯನ್ನು ಸಂಪರ್ಕಿಸುವಂತೆ ಸಮಿತಿಯು ಸಲಹೆಯನ್ನು ನೀಡಿದೆ.
ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ವ್ಯಾಪಕ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಮಾ ಸಮಿತಿಯ ವರದಿ ಬಹಿರಂಗಗೊಳಿಸಿದ ಬೆನ್ನಲ್ಲಿ ಮಲಯಾಳಂ ಸಿನಿಮಾ ರಂಗದ ಹಿರಿಯ ನಟ ಹಾಗೂ ಸಿಪಿಐ(ಎಂ) ಶಾಸಕ ಮುಖೇಶ್, ನಟರಾದ ಸಿದ್ದಿಕ್, ಜಯಸೂರ್ಯ, ಎಡವೇಲ ಬಾಬು, ಬಾಬುರಾಜ್ ಮತ್ತು ನಿರ್ದೇಶಕರಾದ ರಂಜಿತ್ ಮತ್ತು ವಿಕೆ ಪ್ರಕಾಶ್ ವಿರುದ್ಧ ಪ್ರಕರಣಗಳು ದಾಖಲಾಗಿದೆ.
ತಮಿಳು ಸಿನಿಮಾದಲ್ಲೂ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿದ್ದವು. ಲೈಂಗಿಕ ದೌರ್ಜನ್ಯದ ಬಗ್ಗೆ ಕೆಲವು ತಮಿಳು ನಟಿಯರು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲಿ ತಮಿಳು ನಟ ಮತ್ತು ನಾಡಿಗರ್ ಸಂಗಮ್ನ ಪ್ರಧಾನ ಕಾರ್ಯದರ್ಶಿ ವಿಶಾಲ್, ಹೇಮಾ ಸಮಿತಿಯಂತೆಯೇ ಸಮಿತಿಯನ್ನು ರಚಿಸುವುದಾಗಿ ಹೇಳಿದ್ದಾರೆ.
ಸೌಜನ್ಯ : thenewsminute.com