ಪೂರ್ವ ಕರಾವಳಿಯ ತೀರಕ್ಕೆ ಬಂದು ಬಿದ್ದ 1,000ಕ್ಕೂ ಹೆಚ್ಚು ಮೃತ ಸಮುದ್ರ ಆಮೆಗಳು: ಪಾಯಿಂಟ್ ಕ್ಯಾಲಿಮಿಯರ್ ನಲ್ಲಿ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಲಿರುವ ತಮಿಳುನಾಡು

PC: PTI
ಚೆನ್ನೈ: 1,000ಕ್ಕೂ ಹೆಚ್ಚು ಮೃತ ಸಮುದ್ರ ಆಮೆಗಳು (Olive Ridley Turtles) ಚೆನ್ನೈನಿಂದ ಕಾಂಚೀಪುರಂವರೆಗಿನ ಪೂರ್ವ ಕರಾವಳಿ ತೀರಕ್ಕೆ ಬಂದ ಬಿದ್ದ ನಂತರ, ಕೋಡಿಯಾಕರೈ ಅಥವಾ ಪಾಯಿಂಟ್ ಕ್ಯಾಲಿಮಿಯರ್ ನಲ್ಲಿ ಸಮಗ್ರ ಜೀವವೈವಿಧ್ಯ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಲು ತಮಿಳುನಾಡು ಸರಕಾರ ನಿರ್ಧರಿಸಿದೆ. ಈ ಕೇಂದ್ರವು ನಿರ್ದಿಷ್ಟವಾಗಿ ಸಮುದ್ರ ಆಮೆಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತು ಹೆಚ್ಚು ಗಮನ ಕೇಂದ್ರೀಕರಿಸಲಿದೆ.
ಈ ಸಮಗ್ರ ಜೀವವೈವಿಧ್ಯ ಸಂರಕ್ಷಣಾ ಕೇಂದ್ರವು ಅಳಿವಿನಂಚಿನಲ್ಲಿರುವ ಭಾರತೀಯ ಕಾಡು ಕೋಳಿಗಳಿಗೆ ನೆರವು ಒದಗಿಸುತ್ತಿರುವ ಕೋಡಿಯಾಕರೈನ ವಿಶಿಷ್ಟ ಕರಾವಳಿ ಹುಲ್ಲುಗಾವಲಿನ ಪರಿಸರೀಯ ಮಹತ್ವದ ಕುರಿತೂ ಬೆಳಕು ಚೆಲ್ಲಲಿದೆ ಹಾಗೂ ಹಂಚಿಕೆ, ಗುಣಲಕ್ಷಣಗಳು ಹಾಗೂ ಇನ್ನಿತರ ಪ್ರಾಣಿಗಳಿಂದ ಎದುರಿಸುತ್ತಿರುವ ಬೆದರಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಿದೆ.
ಜನವರಿಯಲ್ಲಿ ಸಂಭವಿಸಿದ್ದ ಸಾಗರದ ಪರಿಸರೀಯ ವ್ಯವಸ್ಥೆಯ ಅತ್ಯಗತ್ಯ ಭಾಗವಾಗಿರುವ ಸಮುದ್ರ ಆಮೆಗಳ ಸಾಮೂಹಿಕ ಸಾವು ತೀವ್ರ ಕಳವಳಕ್ಕೆ ಕಾರಣವಾಗಿತ್ತು. ಈ ಕುರಿತು ತುರ್ತು ಕ್ರಮ ಕೈಗೊಳ್ಳದಬೇಕೆಂದು ಪರಿಸರವಾದಿಗಳು ರಾಜ್ಯ ಸರಕಾರವನ್ನು ಆಗ್ರಹಿಸಿದ್ದರು.
ಪಕ್ಷಿಗಳ ವಲಸೆಯನ್ನು ಅರ್ಥ ಮಾಡಿಕೊಳ್ಳುವ, ಸಂರಕ್ಷಿಸುವ ಹಾಗೂ ಸುಧಾರಿಸುವ ವಿಧಾನದೊಂದಿಗೆ, ಗುರುತನ್ನು ಕಂಡು ಹಿಡಿಯಲು, ನಿಗಾ ವಹಿಸಲು ಹಾಗೂ ಪಾಯಿಂಟ್ ಕ್ಯಾಲಿಮಿಯರ್ ಜೌಗು ಪ್ರದೇಶದ ಕೆಸರುಗದ್ದೆಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲು ಈ ಸಮಗ್ರ ಜೀವವೈವಿಧ್ಯ ಸಂರಕ್ಷಣಾ ಕೇಂದ್ರವನ್ನು ಮೀಸಲಿಡಲಾಗಿದೆ.