ಕಾರ್ಮಿಕರ ಮುಷ್ಕರ: ಕಾರ್ಮಿಕರ ಸುರಕ್ಷತೆಗೆ ತಮಿಳುನಾಡು ಸರಕಾರದ ಮಧ್ಯಪ್ರವೇಶ ಕೋರಿದ ಸ್ಯಾಮ್ ಸಂಗ್

PC : PTI
ಚೆನ್ನೈ: ಸಿಐಟಿಯು ಅಂಗ ಸಂಘಟನೆಯಾದ ಸ್ಯಾಮ್ ಸಂಗ್ ಇಂಡಿಯಾ ಕಾರ್ಮಿಕರ ಒಕ್ಕೂಟ ತನ್ನ ಹೋರಾಟವನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ, ಕಾರ್ಮಿಕರ ಸುರಕ್ಷತೆಯನ್ನು ಖಾತರಿಪಡಿಸಲು, ಶಿಸ್ತನ್ನು ಕಾಪಾಡಲು ಹಾಗೂ ವ್ಯವಹಾರವನ್ನು ಸುಗಮವಾಗಿ ನಡೆಸಲು ಮಧ್ಯಪ್ರವೇಶಿಸುವಂತೆ ತಮಿಳುನಾಡು ಸರಕಾರಕ್ಕೆ ಸ್ಯಾಮ್ ಸಂಗ್ ಇಂಡಿಯಾ ಕಂಪೆನಿ ಗುರುವಾರ ಮನವಿ ಮಾಡಿದೆ.
ಸ್ಯಾಮ್ ಸಂಗ್ ಇಂಡಿಯಾ ಕಾರ್ಮಿಕರ ಒಕ್ಕೂಟಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಕಳೆದ ವರ್ಷದ ಸೆಪ್ಟೆಂಬರ್ 9ರಂದು ಪ್ರಾರಂಭಗೊಂಡಿದ್ದ ಕಾರ್ಮಿಕರ ಪ್ರತಿಭಟನೆಯು ಅಕ್ಟೋಬರ್ 4ರವರೆಗೆ ಮುಂದುವರಿದಿದ್ದರಿಂದ ಕಾರ್ಖಾನೆಯು ಸಮಸ್ಯೆಯ ಸುಳಿಗೆ ಸಿಲುಕಿದೆ.
ರಾಜ್ಯ ಸರಕಾರ ಮಧ್ಯಪ್ರವೇಶಿಸಿ, ಸ್ಯಾಮ್ ಸಂಗ್ ಇಂಡಿಯಾ ಹಾಗೂ ಪ್ರತಿಭಟನಾನಿರತ ಕಾರ್ಮಿಕರ ನಡುವೆ ಮಾತುಕತೆ ಏರ್ಪಡಿಸಿದ್ದರಿಂದ, ಸಿಐಟಿಯು ತನ್ನ ಪ್ರತಿಭಟನೆಯನ್ನು ಹಿಂಪಡೆದಿತ್ತು. ಆದರೆ, ಈ ಒಪ್ಪಂದ ಕೆಲವೇ ದಿನಗಳಲ್ಲಿ ಮುರಿದುಬಿದ್ದು, ನಾವು ಪ್ರತಿಭಟನೆಯ ನೇತೃತ್ವ ವಹಿಸಿದ್ದರಿಂದ ನಮ್ಮನ್ನು ಬಲಿಪಶುಗಳನ್ನಾಗಿಸಲಾಗುತ್ತಿದೆ ಹಾಗೂ ಕಂಪೆನಿಯ ನೀತಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂವರು ಸಹೋದ್ಯೋಗಿಗಳನ್ನು ಉದ್ಯೋಗದಿಂದ ಅಮಾನತುಗೊಳಿಸಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದರು.
ಒಂದು ವರ್ಗದ ಕಾರ್ಮಿಕರು ಗುರುವಾರ ಮತ್ತೆ ಕಂಪೆನಿಯ ಕಾರ್ಯಾಚರಣೆ ಹಾಗೂ ಕಾರ್ಖಾನೆಯ ಶಾಂತಿಯನ್ನು ಕಾನೂನುಬಾಹಿರವಾಗಿ ಭಂಗಗೊಳಿಸಲು ಯತ್ನಿಸಿದರು. ಕಾರ್ಖಾನೆಯ ಸ್ಥಿರತೆ ಹಾಗೂ ಉದ್ಯೋಗ ಸ್ಥಳದಲ್ಲಿ ಶಾಂತಿಗೆ ಭಂಗವನ್ನುಂಟು ಮಾಡುವ ಕಾರ್ಮಿಕರ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಕಂಪೆನಿಯು ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ ಎಂದು ಸ್ಯಾಮ್ ಸಂಗ್ ಇಂಡಿಯಾ ಕಂಪೆನಿ Deccan Herald ಸುದ್ದಿ ಸಂಸ್ಥೆಗೆ ತಿಳಿಸಿದೆ.
ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸಿ, ಬಿಕ್ಕಟ್ಟಿಗೆ ಅಂತ್ಯವಾಡುವಲ್ಲಿ ವಿಫಲಗೊಂಡಿರುವುದಕ್ಕೆ ತಮಿಳುನಾಡಿನ ಡಿಎಂಕೆ ಸರಕಾರ ತೀವ್ರ ಟೀಕೆಗೆ ಗುರಿಯಾಗಿದೆ. ತಮಿಳುನಾಡು ಸರಕಾರ ಇಲೆಕ್ಟ್ರಾನಿಕ್ಸ್ ವಲಯದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಮುಂದಾಗಿರುವ ಹೊತ್ತಿನಲ್ಲಿ ಈ ಬಿಕ್ಕಟ್ಟು ಸೃಷ್ಟಿಯಾಗಿದೆ.