ತಮಿಳುನಾಡು ವಿಧಾನಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ

Photo credit: ANI
ಚೆನ್ನೈ: ಕೇಂದ್ರ ಸರಕಾರದ ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯಿಂದ ಮುಸ್ಲಿಂ ಸಮುದಾಯ ಮೇಲೆ ಬಹಳ ಕೆಟ್ಟ ಪರಿಣಾಮವುಂಟಾಗಲಿದ್ದು, ಕೇಂದ್ರ ಸರಕಾರ ತಕ್ಷಣವೇ ಮಸೂದೆಯನ್ನು ಹಿಂಪಡೆಯಬೇಕು ಎಂದು ಗುರುವಾರ ತಮಿಳುನಾಡಿನ ಡಿಎಂಕೆ ನೇತೃತ್ವದ ಸರಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, “ವಕ್ಫ್ ಮಂಡಳಿಯ ಅಧಿಕಾರವನ್ನು ಕಿತ್ತುಕೊಳ್ಳಲು ಕೇಂದ್ರ ಸರಕಾರವು ವಕ್ಫ್ ಮಸೂದೆಗೆ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ. ಇದರಿಂದ ಮುಸ್ಲಿಮರ ಭಾವನೆಗಳಿಗೆ ಘಾಸಿಯಾಗಿದ್ದರೂ, ಕೇಂದ್ರ ಸರಕಾರ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ” ಎಂದು ಆರೋಪಿಸಿದರು.
“ಭಾರತದಲ್ಲಿ ಜನರು ಧಾರ್ಮಿಕ ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ. ಎಲ್ಲರಿಗೂ ತಮ್ಮ ಧರ್ಮಗಳನ್ನು ಪಾಲಿಸುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಆ ಸ್ವಾತಂತ್ರ್ಯವನ್ನು ರಕ್ಷಿಸುವ ಅಧಿಕಾರ ಚುನಾಯಿತ ಸರಕಾರಗಳಿಗೆ ಇದೆ. ಹೀಗಾಗಿ, ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿರುವ ವಕ್ಫ್ ಕಾಯ್ದೆ- 1995ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆ-2024ರ ಕುರಿತು ಕೇಂದ್ರ ಸರಕಾರ ಮರು ಪರಿಶೀಲಿಸಬೇಕು ಹಾಗೂ ಹಿಂಪಡೆಯಬೇಕು ಎಂದು ಈ ಸದನವು ಸರ್ವಾನುಮತದಿಂದ ಒತ್ತಾಯಿಸುತ್ತದೆ” ಎಂದೂ ಅವರು ಹೇಳಿದರು.
ಆದರೆ, ಡಿಎಂಕೆ ಸರಕಾರದ ನಡೆಯನ್ನು ಟೀಕಿಸಿದ ಎಐಎಡಿಎಂಕೆ ರಾಷ್ಟ್ರೀಯ ವಕ್ತಾರ ಕೊವೈ ಸತ್ಯನ್, ಇದು ಧರ್ಮಾಧಾರಿತ ನಿರೂಪಣೆಯಾಗಿದೆ ಎಂದು ಆಕ್ಷೇಪಿಸಿದರು. “ಡಿಎಂಕೆಯು ಧರ್ಮ, ಭಾಷೆಯನ್ನು ಆಧರಿಸಿ ನಿರೂಪಣೆಯೊಂದನ್ನು ರೂಪಿಸುವ ತರಾತುರಿಯಲ್ಲಿದ್ದಂತೆ ಕಾಣುತ್ತಿದೆ. ಇಲ್ಲಿ ಪ್ರಶ್ನೆಯೆಂದರೆ, ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪರಿಶೀಲಿಸಲು ಜಂಟಿ ಸದನ ಸಮಿತಿಯನ್ನು ರಚಿಸಲಾಗಿತ್ತು ಹಾಗೂ ಅದರ ಫಲಶ್ರುತಿಯೇನು ಎಂಬುದಾಗಿದೆ. ಜಂಟಿ ಸದನ ಸಮಿತಿಯಲ್ಲಿ ಸದಸ್ಯರಾಗಿದ್ದ ಪಕ್ಷಗಳು ವಕ್ಫ್ ತಿದ್ದುಪಡಿ ಮಸೂದೆಯನ್ನು ನ್ಯಾಯಾಲಯಗಳಲ್ಲೇಕೆ ಪ್ರಶ್ನಿಶಸುತ್ತಿಲ್ಲ? ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲು ಯಾಕೆ ತರಾತುರಿ ಪ್ರದರ್ಶಿಸಲಾಗುತ್ತಿದೆ? ಮತ ಬ್ಯಾಂಕ್ ರಾಜಕಾರಣಕ್ಕಾಗಿ ಜನರನ್ನು ಪ್ರಚೋದಿಸಲು ಯತ್ನಿಸುತ್ತಿರುವುದು ತೀವ್ರ ಖಂಡನಾರ್ಹ” ಎಂದು ಅವರು ವಾಗ್ದಾಳಿ ನಡೆಸಿದರು.
ಬುಧವಾರ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾದ ಬೆನ್ನಿಗೇ, ಗುರುವಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ.