ರಾಷ್ಟ್ರಮಟ್ಟದಲ್ಲಿ ಪರೀಕ್ಷೆ ರದ್ದತಿಗೆ ಕೇಂದ್ರಕ್ಕೆ ಒತ್ತಾಯಿಸಿ ತಮಿಳುನಾಡು ವಿಧಾನಸಭೆ ನಿರ್ಣಯ
ನೀಟ್ ವಿನಾಯಿತಿ ಮಸೂದೆಯ ಅಂಗೀಕಾರ
ಎಂ.ಕೆ.ಸ್ಟಾಲಿನ್ | PC : PTI
ಚೆನ್ನೈ : ತಮಿಳುನಾಡು ವಿಧಾನಸಭೆಯು ರಾಜ್ಯದ ನೀಟ್ ವಿನಾಯಿತಿ ಮಸೂದೆಯನ್ನು ತಕ್ಷಣ ಅನುಮೋದಿಸುವಂತೆ ಮತ್ತು ರಾಷ್ಟ್ರಮಟ್ಟದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿಗಳನ್ನು ತರುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ನಿರ್ಣಯವನ್ನು ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ಬಿಜೆಪಿಯ ಶಾಸಕರು ಸಭಾತ್ಯಾಗ ನಡೆಸಿದರೆ, ಡಿಎಂಕೆಯ ಮಿತ್ರಪಕ್ಷಗಳ ಶಾಸಕರು, ಟವಿಕೆಯ ಟಿ.ವೇಲ್ಮುರುಗನ್, ಎಂಎಂಕೆಯ ಎಂ.ಎಚ್.ಜವಾಹಿರುಲ್ಲಾ ಮತ್ತು ಎಐಎಡಿಎಂಕೆಯ ಮನೋಜ್ ಪಿ.ಪಾಂಡಿಯನ್, ಬಿಜೆಪಿಯ ಮಿತ್ರಪಕ್ಷ ಪಿಎಂಕೆ ಶಾಸಕರು ನಿರ್ಣಯವನ್ನು ಬೆಂಬಲಿಸಿದರು.
ನಿರ್ಣಯವನ್ನು ಪ್ರಸ್ತಾವಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, 12ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶ ವ್ಯವಸ್ಥೆಯು ಸಮಾಜದ ವಿವಿಧ ವರ್ಗಗಳ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಜೊತೆಗೆ ರಾಜ್ಯದ ಪ್ರತಿಭಾಗದಲ್ಲಿಯೂ ವೈದ್ಯರು ಸೃಷ್ಟಿಯಾಗಲು ಅನುವು ಮಾಡಿಕೊಟ್ಟಿದ್ದರೆ, ನೀಟ್ ಪರೀಕ್ಷೆಯು ವಿವಿಧ ಅಕ್ರಮಗಳು, ಅವ್ಯವಹಾರಗಳಿಂದ ಕಳಂಕಿತಗೊಂಡಿದೆ. ಅಕ್ರಮಗಳ ಆರೋಪಗಳನ್ನು ಆರಂಭದಲ್ಲಿ ನಿರಾಕರಿಸಿದ್ದ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದ ಛೀಮಾರಿಯ ಬಳಿಕವಷ್ಟೇ ನೀಟ್ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯ ಮುಖ್ಯಸ್ಥರನ್ನು ಬದಲಾಯಿಸಿದೆ. ಪರೀಕ್ಷಾ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗಾಗಿ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ಹಲವು ವರ್ಷಗಳಿಂದ ತಮಿಳುನಾಡು ಮತ್ತು ಅದರ ಜನರು ನೀಟ್ ವಿರುದ್ಧ ಏಕಾಂಗಿ ಹೋರಾಟವನ್ನು ನಡೆಸುತ್ತಿದ್ದಾರೆ. ನೀಟ್ ಪರೀಕ್ಷೆಯು ಸಮಸ್ಯೆಗಳನ್ನು ಮನಗಂಡಿರುವ ವಿವಿಧ ರಾಜ್ಯಗಳಲ್ಲಿ ಈಗ ಅದಕ್ಕೆ ವಿರೋಧವು ಬಲಗೊಳ್ಳುತ್ತಿದೆ ಎಂದು ಸ್ಟಾಲಿನ್ ಬೆಟ್ಟು ಮಾಡಿದರು.