ತಮಿಳುನಾಡು | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಪೋಕ್ಸೊ ಕಾಯ್ದೆಯಡಿ ಬಿಜೆಪಿ ನಾಯಕನ ಬಂಧನ
ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಯ ಮೌನವನ್ನು ಪ್ರಶ್ನಿಸಿದ ಪತ್ರಕರ್ತ ಝುಬೈರ್
ಬಂಧಿತ ಆರೋಪಿ ಎಂಎಸ್ ಶಾ ಜೊತೆ ಅಣ್ಣಾಮಲೈ (Photo credit: X/@zoo_bear)
ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಯನ್ನು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.
ತಮಿಳುನಾಡು ಬಿಜೆಪಿ ಆರ್ಥಿಕ ವಿಭಾಗದ ಮುಖ್ಯಸ್ಥ ಎಂಎಸ್ ಶಾ ಬಂಧಿತ ಆರೋಪಿ. ಈತನನ್ನು 15ರ ಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿ ಬಾಲಕಿಯ ತಂದೆಯ ದೂರಿನ ಮೇರೆಗೆ ಬಂಧಿಸಲಾಗಿದೆ.
ʼಮಗಳ ಫೋನ್ ನಲ್ಲಿ ಅಶ್ಲೀಲ ಸಂದೇಶಗಳಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ಶಾ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ್ದಾನೆ. ಬಳಿಕ ದ್ವಿಚಕ್ರ ವಾಹನ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ ಎಂದು ಹೇಳಿದ್ದಾಳೆʼ ಎಂದು ಸಂತ್ರಸ್ತೆಯ ತಂದೆ ಈ ಕುರಿತು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಪತ್ರಕರ್ತ ಮಹಮ್ಮದ್ ಝುಬೈರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಈ ಬಗ್ಗೆ ಮೌನವಾಗಿರುತ್ತಾರಾ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಗೆ ನ್ಯಾಯಕ್ಕಾಗಿ ಸ್ವಯಂ ಛಡಿಯೇಟು ಕೊಟ್ಟುಕೊಳ್ಳುತ್ತಾರಾ? ಇದನ್ನು ಏಷ್ಯಾದ ಪ್ರಮುಖ ಮಲ್ಟಿ ಮೀಡಿಯಾ ಸುದ್ದಿ ಸಂಸ್ಥೆ ವರದಿ ಮಾಡುತ್ತಾ ಎಂದು ಪ್ರಶ್ನಿಸಿದ್ದಾರೆ.
Will Tamilnadu BJP State president Thiru @annamalai_k remain silent or whip himself with a cotton rope to protest against sexual assault? Will Asia's Leading Multimedia News Agency report this? https://t.co/g1qSOgObQ0 pic.twitter.com/Fa1PLi9Fon
— Mohammed Zubair (@zoo_bear) January 14, 2025